ಐದು ವರ್ಷಗಳಲ್ಲಿ 2 ಲಕ್ಷ ಖಾಸಗಿ ಸಂಸ್ಥೆಗಳಿಗೆ ಬೀಗಮುದ್ರೆ: ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಸರಕಾರ

PC:x.com/aajtak
ಹೊಸದಿಲ್ಲಿ: ಕಳೆದ ಐದು ವರ್ಷದಲ್ಲಿ ದೇಶಾದ್ಯಂತ ಒಟ್ಟು 2.04 ಲಕ್ಷ ಖಾಸಗಿ ಕಂಪನಿಗಳು ಮುಚ್ಚಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಪ್ರಕಟಿಸಿದೆ.
ಈ ಅವಧಿಯಲ್ಲಿ ವಿಲೀನ, ಪರಿವರ್ತನೆ, ವಿಸರ್ಜನೆ ಅಥವಾ ಕಂಪನಿಗಳ ಕಾಯ್ದೆ-2013ರ ಅಡಿಯಲ್ಲಿ ನೋಂದಣಿ ರದ್ದುಪಡಿಸಿರುವುದು ಸೇರಿದಂತೆ ಒಟ್ಟು 2,04,268 ಕಂಪನಿಗಳು ಮುಚ್ಚಿವೆ ಎಂದು ಕಾರ್ಪೊರೇಟ್ ವ್ಯಹಾರಗಳ ಖಾತೆ ರಾಜ್ಯ ಸಚಿವ ಹರ್ಷ್ ಮಲ್ಹೋತ್ರಾ ಲಿಖಿತ ಉತ್ತರದಲ್ಲಿ ತಿಳಿಸಿದರು.
ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 20,365 ಕಂಪನಿಗಳು ಮುಚ್ಚಿದ್ದು, ಇದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಅನುಕ್ರಮವಾಗಿ 21,181 ಮತ್ತು 83,452 ಕಂಪನಿಗಳು ಮುಚ್ಚಿವೆ. 2021-22ರಲ್ಲಿ 60,054 ಹಾಗೂ 2020-21ರಲ್ಲಿ 15,216 ಕಂಪನಿಗಳು ಮುಚ್ಚಿವೆ ಎಂದು ಅಂಕಿ ಅಂಶ ನೀಡಿದರು. ಮುಚ್ಚಿದ ಕಂಪನಿಗಳ ಉದ್ಯೋಗಿಗಳಿಗೆ ಬೇರೆಡೆ ಅವಕಾಶ ಮಾಡಿಕೊಡಲಾಗಿದೆಯೇ ಎಂಬ ಪ್ರಶ್ನೆಗೆ, ಅಂಥ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
2021-22ನೇ ಹಣಕಾಸು ವರ್ಷದ ಆರಂಭದಿಂದ ಐದು ಹಣಕಾಸು ವರ್ಷಗಳಲ್ಲಿ 1,85,350 ಕಂಪನಿಗಳನ್ನು ಅಧಿಕೃತ ದಾಖಲೆಗಳಿಂದ ಕಿತ್ತುಹಾಕಿದ್ದು, ಪ್ರಸಕ್ತ ಹಣಕಾಸು ವರ್ಷದ ಜುಲೈ ತಿಂಗಳ 16ರವರೆಗೆ 8648 ಕಂಪನಿಗಳನ್ನು ಹೊಡೆದು ಹಾಕಲಾಗಿದೆ. ಧೀರ್ಘಕಾಲದಿಂದ ಕಾರ್ಯಾಚರಣೆ ನಡೆಸದ ಅಥವಾ ನಿಯಂತ್ರಣಾತ್ಮಕ ಅಗತ್ಯತೆಗಳನ್ನು ಪೂರೈಸಿದ ಬಳಿಕ ಸ್ವಯಂ ಆಗಿ ಕಿತ್ತುಹಾಕಲು ಮನವಿ ಸಲ್ಲಿಸಿದ ಕಂಪನಿಗಳನ್ನು ನೋಂದಣಿ ವ್ಯವಸ್ಥೆಯಿಂದ ಕಿತ್ತುಹಾಕಲಾಗುತ್ತದೆ.





