ಒಡಿಶಾ ರೈಲು ದುರಂತ ಪ್ರಕರಣಕ್ಕೆ 2 ತಿಂಗಳು: 29 ಮೃತದೇಹಗಳ ಗುರುತು ಇನ್ನೂ ಪತ್ತೆಯಿಲ್ಲ

ಭುವನೇಶ್ವರ: ಎರಡು ತಿಂಗಳುಗಳ ಹಿಂದೆ ಒಡಿಶಾದ ಬಹನಾಗಾ ಬಝಾರ್ ರೈಲು ನಿಲ್ದಾಣದ ಸಮೀಪ ಸಂಭವಿಸಿದ ತ್ರಿವಳಿ ರೈಲು ಅವಘಡದಲ್ಲಿ ಮೃತಪಟ್ಟ 295 ಮಂದಿಯ ಪೈಕಿ, 29 ಮೃತದೇಹಗಳನ್ನು ಈತನಕ ಗುರುತಿಸಲು ಸಾಧ್ಯವಾಗಿಲ್ಲವೆಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಗುರುತಿಸಲಾಗದ ಮೃತದೇಹಗಳನ್ನು ಏಮ್ಸ್ ಭುವನೇಶ್ವರದಲ್ಲಿರುವ ಐದು ಕಂಟೈನರ್‌ಗಳಲ್ಲಿ ಸಂರಕ್ಷಿಸಿಡಲಾಗಿದ್ದು, ಉಳಿದ 266 ಮಂದಿಯ ಮೃತದೇಹಗಳನ್ನು ಅವರ ಬಂಧುಗಳಿಗೆ ಹಸ್ತಾಂತರಿಸಲಾಗಿದೆ ಎಂದು ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನ ಪ್ರೊಫೆಸರ್ ದಿಲೀಪ್ ಕುಮಾರ್ ಪರಿಡಾ ತಿಳಿಸಿದ್ದಾರೆ.
ಜೂನ್ 2ರಂದು ತ್ರಿವಳಿ ರೈಲು ದುರಂತ ಸಂಭವಿಸಿದ ಬಳಿಕ ವಿವಿಧ ಆಸ್ಪತ್ರೆಗಳು ಹಾಗೂ ಅವಘಡ ಸ್ಥಳದಿಂದ 162ಕ್ಕೂ ಅಧಿಕ ಮೃತದೇಹಗಳನ್ನು ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ ಆಸ್ಪತ್ರೆ ಸ್ವೀಕರಿಸಿದ್ದು, ಮೊದಲ ಹಂತದಲ್ಲಿ 81 ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು.
ಪ್ರಾಥಮಿಕ ಹಂತದಲ್ಲಿ 81 ಮೃತದೇಹಗಳನ್ನು ಗುರುತಿಲು ಸಾಧ್ಯವಾಗಿರಲಿಲ್ಲ. ಒಂದೇ ಮೃತದೇಹಕ್ಕೆ ಹಲವು ಮಂದಿ ‘ವಾರಸುದಾರ’ರಿಂದ ಹಕ್ಕು ಮಂಡನೆ, ಮತ್ತಿತರ ಕಾರಣಗಳಿಗಾಗಿ ಮೊದಲ ಹಂತದಲ್ಲಿ ಅವುಗಳನ್ನು ಹಸ್ತಾಂತರಿಸಿರಲಿಲ್ಲವೆಂದು ಪರಿಡಾ ತಿಳಿಸಿದರು. ಆನಂತರ ಡಿಎನ್‌ಎ ಪರೀಕ್ಷೆಗಳ ಆಧಾರದಲ್ಲಿ 52ಕ್ಕೂ ಅಧಿಕ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು ಹಾಗೂ 29 ಮೃತದೇಹಗಳನ್ನು ಇನ್ನೂ ಗುರುತಿಸಲು ಸಾಧ್ಯವಾಗಿರಲಿಲ್ಲ. ಕಾನೂನು ಪ್ರಕಾರ ಡಿಎನ್‌ಎ ಹೊಂದಿಕೆಯಾಗದ ಮೃತದೇಹಗಳನ್ನು ಹಕ್ಕುದಾರರಿಗೆ ಹಸ್ತಾಂತರಿಸುವಂತಿಲ್ಲವೆಂದು ಅವರು ಹೇಳಿದರು.
ತ್ರಿವಳಿ ರೈಲು ದುರಂತದಲ್ಲಿ ಮೃತಪಟ್ಟ ಜಾರ್ಖಂಡ್‌ನ ಧುಮ್ಕಾ ಪ್ರದೇಶದ ನಿವಾಸಿ ಹರದೇವ್ ಕುಮಾರ್ ಮೃತದೇಹವು ಇನ್ನೂ ಅವರ ಬಂಧುಗಳಿಗೆ ಹಸ್ತಾಂತರವಾಗಿಲ್ಲ. ಆತ ಸಹೋದರ ಕೈಲಾಶ್ ಕುಮಾರ್ ತನ್ನ ಡಿಎನ್‌ಎ ಮಾದರಿಯನ್ನು ಸಲ್ಲಿಸಿದ್ದಾರೆ. ಆದರೆ ಅವರಿಗೆ ದೃಢೀಕರಣ ವರದಿ ಇನ್ನಷ್ಟೇ ದೊರೆಯಬೇಕಾಗಿದೆ.
ಶಾಲಿಮಾರ್‌ನಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸಪ್ರೆಸ್ ಹಾಗೂ ನಿಲುಗಡೆಯಾಗಿದ್ದ ಗೂಡ್ಸ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ 295 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 1200 ಮಂದಿ ಗಾಯಗೊಂಡಿದ್ದಾರೆ.







