ಪೋಷಕರ ನಡುವಿನ ವಾಗ್ವಾದದಿಂದ ಬೇಸತ್ತು ಇಬ್ಬರು ಸಹೋದರಿಯರು ಆತ್ಮಹತ್ಯೆ

ಫಿಲ್ಬಿಟ್ (ಉತ್ತರ ಪ್ರದೇಶ): ತಮ್ಮ ಪೋಷಕರೊಂದಿಗಿನ ವಾಗ್ವಾದದ ನಂತರ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಘಟನೆಯು ಪೂರಣ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವೃತ್ತಾಧಿಕಾರಿ ಅಲೋಕ್ ಸಿಂಗ್, “ಸ್ಥಳೀಯ ಕಾರ್ಪೊರೇಟರ್ ಆದ ಅಸೀಮ್ ರಾಝಾರ ಪುತ್ರಿಯರಾದ ಕಾಶಿಶ್ (20) ಹಾಗೂ ಆಕೆಯ ಸಹೋದರಿ ಮುನ್ನಿ (18) ರವಿವಾರ ಸಂಜೆ ವಿಷ ಸೇವಿಸಿದ್ದಾರೆ. ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕೌಟುಂಬಿಕ ವಿಚಾರಗಳ ಕುರಿತು ಪೋಷಕರು ಪದೇ ಪದೇ ಜಗಳವಾಡುತ್ತಿದ್ದರು. ಅಂತಹುದೇ ಒಂದು ಜಗಳ ರವಿವಾರ ಕೂಡಾ ನಡೆದಿದೆ. ಇದರಿಂದ ಕುಗ್ಗಿ ಹೋಗಿರುವ ಅವರ ಪುತ್ರಿಯರು, ಇಂತಹ ಅತಿರೇಕದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಾರಂಭದಲ್ಲಿ, ಕುಟುಂಬದ ಸದಸ್ಯರು ಈ ವಿಷಯದ ಕುರಿತು ಯಾವುದೇ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ನೀಡಲಿಲ್ಲ. ಆದರೆ, ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಯಿತು ಎಂದು ವೃತ್ತಾಧಿಕಾರಿ ಅಲೋಕ್ ಸಿಂಗ್ ಹೇಳಿದ್ದಾರೆ.







