ಜಗತ್ತಿನ ಟಾಪ್ 20 ಮಾಲಿನ್ಯಪೀಡಿತ ನಗರಗಳ ಪಟ್ಟಿಯಲ್ಲಿ 13 ಭಾರತದ ನಗರಗಳು!

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: 2024ರಲ್ಲಿ ಜಗತ್ತಿನ 20 ಅತ್ಯಂತ ಮಾಲಿನ್ಯಪೀಡಿತ ನಗರಗಳ ಪೈಕಿ 13 ಭಾರತದಲ್ಲಿವೆಯೆಂದು ಸ್ವಿಸ್ ವಾಯು ತಂತ್ರಜ್ಞಾನ ಕಂಪೆನಿಯು ಪ್ರಕಟಿಸಿದ ವಾಯುಗುಣಮಟ್ಟ ವರದಿ ಬಹಿರಂಗಪಡಿಸಿದೆ. ಈಶಾನ್ಯ ಭಾರತದ ರಾಜ್ಯ ಮೇಘಾಲಯದ ಬಿರ್ನಿಹಾಟ್ ನಗರವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಐಕ್ಯೂಏರ್ನ ಜಾಗತಿಕ ವಾಯುಗುಣಮಟ್ಟ ವರದಿ 2024ರ ಪ್ರಕಾರ, ಅತ್ಯಧಿಕ ವಾಯುಮಾಲಿನ್ಯ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತದ ರ್ಯಾಂಕಿಂಗ್ 2023ರಲ್ಲಿ ಮೂರರಲ್ಲಿದ್ದುದು, ಕಳೆದ ವರ್ಷ ಐದಕ್ಕೆ ಕುಸಿದಿದೆ. ವಾಯುಮಾಲಿನ್ಯವನ್ನು ಅಳೆಯುವ ಮಾನದಂಡವಾದ ಪಿಎಂ 2.5 ಸಾಂದ್ರತೆಯಲ್ಲಿ ಶೇ.7ರಷ್ಟು ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ.
ಆದಾಗ್ಯೂ ದಿಲ್ಲಿಯ ಪಿಎಂ 2.5 ಸಾಂದ್ರತೆಯ ಮಟ್ಟವು 2023ರಲ್ಲಿ ಪ್ರತಿ ಘನ ಮೀಟರ್ ಮೈಕ್ರೋಗ್ರಾಂಗೆ 102.4 ಇದ್ದುದು 2024ರಲ್ಲಿ 108.3ಕ್ಕೇರಿದೆ ಜಗತ್ತಿನ ಅತ್ಯಂತ ಮಾಲಿನ್ಯ ಪೀಡಿತ ರಾಜಧಾನಿಯೆಂಬ ಹಣೆಪಟ್ಟಿಯು ಸತತ ಆರನೇ ಸಲವೂ ದಿಲ್ಲಿ ಮಹಾನಗರ ಪಾಲಿಕೆಯ ಪಾಲಾಗಿದೆ.
ವಾಹನಗಳ ಹೊಗೆ ವಿಸರ್ಜನೆ ಹಾಗೂ ಹರ್ಯಾಣ, ಪಂಜಾಬ್ ರಾಜ್ಯಗಳ ರೈತರು ಪೈರುಗಳ ಕೂಳೆಯನ್ನು ಸಟ್ಟುಹಾಕುವುದು ಮತ್ತಿತರ ಕಾರಣಗಳಿಂದಾಗಿ ರಾಷ್ಟ್ರ ರಾಜಧಾನಿಯು ವರ್ಷವಿಡೀ ಅತ್ಯಧಿಕ ವಾಯುಮಾಲಿನ್ಯವನ್ನು ಅನುಭವಿಸುತ್ತಿದೆ.
ಶೇ.35ರಷ್ಟು ಭಾರತೀಯ ನಗರಗಳ ವಾಯುಮಾಲಿನ್ಯವು ವಾರ್ಷಿಕವಾಗಿ 2.5 ಪಿಎಂ ಮಟ್ಟವನ್ನು ದಾಟಿದ್ದು ಇದು ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದ ಮಟ್ಟಕ್ಕಿಂತ 10 ಪಟ್ಟು ಅಧಿಕವಾಗಿದೆ.
ದೇಶದ ಅತ್ಯಧಿಕ ವಾಯುಮಾಲಿನ್ಯ ಪೀಡಿತ ನಗರಗಳ ಪೈಕಿ ಹೆಚ್ಚಿನವು ರಾಜಸ್ಥಾನದಿಂದ ಹಿಡಿದು ಪಶ್ಚಿಮ ಉತ್ತರ ಪ್ರದೇಶದವರೆಗೆ ವಾಯವ್ಯ ಭಾರತದಲ್ಲಿ ಕೇಂದ್ರೀಕೃತವಾಗಿವೆ. ರಾಜಸ್ತಾನದ ಭಿವಾಡಿ, ಗಂಗಾನಗರ ಹಾಗೂ ಹನುಮಾನಗಢ, ಪಂಜಾಬ್ನ ಮಲ್ಲಾನ್ಪುರ, ಹರ್ಯಾಣದ ಫರೀದಾಬಾದ್ ಹಾಗೂ ಗುರುಗ್ರಾಮ, ಉತ್ತರಪ್ರದೇಶ ಲೋನಿ, ಮುಝಾಫರ್ನಗರ,ನೊಯ್ಡಾ ಹಾಗೂ ಗ್ರೇಟರ್ ನೊಯ್ಡಾ ಅವುಗಳಲ್ಲಿ ಒಳಗೊಂಡಿವೆ.
ವಾಯುಮಾಲಿನ್ಯವ ಭಾರತದಲ್ಲಿ ಜನರ ಆರೋಗ್ಯದ ಮೇಲೆ ಗಣನೀಯ ಸಮಸ್ಯೆಯನ್ನುಂಟು ಮಾಡಿದೆ. ಇದರಿಂದಾಗಿ ಭಾರತೀಯನ ಸರಾಸರಿ ಜೀವಿತಾವಧಿಯು 5.2 ವರ್ಷಗಳಷ್ಟು ಇಳಿಕೆಯಾಗಿದೆ. ಭಾರತದಲ್ಲಿ 2009ರಿಂದ 2019ರವರೆಗೆ ಸುಮಾರು 10.50 ಲಕ್ಷ ಸಾವುಗಳು ಪಿಎಂ 2.5 ಮಾಲಿನ್ಯಕ್ಕೆ ದೀರ್ಘಕಾಲದಿಂದ ಒಡ್ಡಿಕೊಂಡಿರುವುದರಿಂದ ಸಂಭವಿಸಿರುವುದಾಗಿದೆ.
ಭಾರತವು ವಾಯುಮಾಲಿನ್ಯ ದತ್ತಾಂಶವನ್ನು ಸಂಗ್ರಹಿಸುವಲ್ಲಿ ಪ್ರಗತಿಯನ್ನು ಸಾಧಿಸಿದೆ. ಆದರೆ ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳುವಲ್ಲಿ ಹಿಂದುಳಿದಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಡಾನಿ ಹಾಗೂ ಆರೋಗ್ಯ ಸಚಿವಾಲಯದ ಸಲಹೆಗಾರ ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.
►ಭಾರತದ 13 ಮಾಲಿನ್ಯಭರಿತ ನಗರಗಳು:
ಬಿರ್ನಿಹಾಟ್ (ಮೇಘಾಲಯ), ದಿಲ್ಲಿ, ಮುಲ್ಲಾನ್ಪುರ (ಪಂಜಾಬ್), ಫರೀದಾಬಾದ್, ಲೋನಿ, ಹೊಸದಿಲ್ಲಿ, ಗುರುಗ್ರಾಮ,ಗಂಗಾನಗರ, ಗ್ರೇಟರ್ ನೊಯ್ಡಾ, ಭಿವಾಡಿ, ಮುಝಾಫರ್ನಗರ, ಹನುಮಾನ್ಗಡ, ನೊಯ್ಡಾ







