ಸುನಾಮಿಯಲ್ಲಿ ಬದುಕುಳಿದ ಅನಾಥೆಯ ವಿವಾಹ ನೆರವೇರಿಸಿಕೊಟ್ಟ ಐಎಎಸ್ ಅಧಿಕಾರಿ
20 ವರ್ಷಗಳ ಮೊದಲು ಅವಶೇಷಗಳ ಬಳಿ ಅಳುತ್ತಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಿದ್ದ ಜಿಲ್ಲಾಧಿಕಾರಿ

Photo| Instagram/drjradhakrishnan
ಚೆನ್ನೈ : 2004ರಲ್ಲಿ ಹಿಂದೂ ಮಹಾಸಾಗರದಿಂದ ಅಪ್ಪಳಿಸಿದ ಸುನಾಮಿ ತಮಿಳುನಾಡಿನ ನಾಗಪಟ್ಟಣದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿತ್ತು. ಈ ವೇಳೆ ನಾಗಪಟ್ಟಣ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಡಾ. ಜೆ. ರಾಧಾಕೃಷ್ಣನ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸುನಾಮಿ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಡಾ. ಜೆ. ರಾಧಾಕೃಷ್ಣನ್, ಇದೀಗ ಸುನಾಮಿಯಲ್ಲಿ ಬದುಕುಳಿದ ಪುಟ್ಟ ಬಾಲಕಿಯ ವಿವಾಹವನ್ನು ಕೂಡ ನೆರವೇರಿಸಿಕೊಟ್ಟು ಮಾದರಿಯಾಗಿದ್ದಾರೆ.
ಸುನಾಮಿಗೆ ನಾಗಪಟ್ಟಣ ಜಿಲ್ಲೆಯಲ್ಲಿ 6,000ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದವು. ಸುನಾಮಿ ಅಪ್ಪಳಿಸಿದ ಪ್ರದೇಶದಲ್ಲಿ ಪರಿಶೀಲನೆಗೆ ತೆರಳಿದ್ದ ಜಿಲ್ಲಾಧಿಕಾರಿ ಡಾ.ಜೆ.ರಾಧಾಕೃಷ್ಣನ್ ಅವರಿಗೆ ಕೀಚಂಕುಪ್ಪಂ ಗ್ರಾಮದಲ್ಲಿ ಅವಶೇಷಗಳ ಬಳಿ ಮೀನಾ ಎಂಬ ಪುಟ್ಟ ಬಾಲಕಿ ಅಳುತ್ತಿರುವುದು ಕಂಡು ಬಂದಿತ್ತು. ಸುನಾಮಿಯಲ್ಲಿ ಕುಟುಂಬವನ್ನು ಕಳೆದುಕೊಂಡು ಅನಾಥಳಾಗಿದ್ದ ಬಾಲಕಿಯನ್ನು ಸಂತೈಸಿದ ಡಾ. ಜೆ. ರಾಧಾಕೃಷ್ಣನ್ ಆಕೆಯನ್ನು ನಾಗಪಟ್ಟಣದಲ್ಲಿರುವ ಅನ್ನೈ ಸತ್ಯ ಸರ್ಕಾರಿ ಮಕ್ಕಳ ಪಾಲನಾ ಗೃಹಕ್ಕೆ ದಾಖಲಿಸಿದ್ದರು. ಡಾ. ಜೆ. ರಾಧಾಕೃಷ್ಣನ್ ಮಗವನ್ನು ಪಾಲನಾ ಗೃಹಕ್ಕೆ ದಾಖಲಿಸಿ ಸುಮ್ಮನಾಗಿಲ್ಲ, ತಮ್ಮ ವರ್ಗಾವಣೆ ಬಳಿಕವೂ ಬಾಲಕಿಯ ಬಗ್ಗೆ ಹೆಚ್ಚಿನ ನಿಗಾವಹಿಸಿದ್ದರು.
ಭೀಕರ ಸುನಾಮಿ ಅಪ್ಪಳಿಸಿ ಇದೀಗ 20 ವರ್ಷಗಳೇ ಕಳೆದಿದೆ. ಅನಾಥಳಾಗಿದ್ದ ಬಾಲಕಿ ಮೀನಾ ಬೆಳದು ದೊಡ್ಡವಳಾಗಿದ್ದಾಳೆ. ಅನ್ನೈ ಸತ್ಯ ಸರ್ಕಾರಿ ಮಕ್ಕಳ ಪಾಲನಾ ಗೃಹದಲ್ಲಿದ್ದ ಮೀನಾಗೆ ಡಾ. ಜೆ. ರಾಧಾಕೃಷ್ಣನ್ ಮತ್ತು ಪತ್ನಿ ಕೃತಿಕಾ ನೆರವು ನೀಡಿದ್ದು, ಇದೀಗ ಮೀನಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕೆಲಸದ ಒತ್ತಡ, ವರ್ಗಾವಣೆಗಳ ಮಧ್ಯೆಯೂ ಡಾ. ಜೆ. ರಾಧಾಕೃಷ್ಣನ್ ದಂಪತಿ ಮೀನಾ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದ್ದರು. ಮೀನಾ ಅವರ ಜೀವನದಲ್ಲಿನ ಪ್ರತಿಯೊಂದು ಪ್ರಮುಖ ಮೈಲಿಗಲ್ಲುಗಳಲ್ಲೂ ರಾಧಾಕೃಷ್ಣನ್ ಭಾಗವಹಿಸಿದ್ದರು. ಇದೀಗ ಮೀನಾ ಅವರ ವಿವಾಹ ಸಮಾರಂಭವನ್ನು ಕೂಡ ರಾಧಾಕೃಷ್ಣನ್ ನಾಗಪಟ್ಟಣಕ್ಕೆ ತೆರಳಿ ನೆರವೇರಿಸಿಕೊಟ್ಟಿದ್ದಾರೆ. ನರ್ಸ್ ಆಗಿರುವ ಮೀನಾ ನಾಗಪಟ್ಟಣದ ಬ್ಯಾಂಕ್ ಉದ್ಯೋಗಿ ಪಿ ಮಣಿಮಾರನ್ ಅವರನ್ನು ವಿವಾಹವಾಗಿದ್ದಾರೆ. ನಾಗಪಟ್ಟಣದ ಶ್ರೀ ನೆಲ್ಲುಕ್ಕಡೈ ಮಾರಿಯಮ್ಮನ್ ದೇವಸ್ಥಾನದಲ್ಲಿ ಮೀನಾ ಅವರ ವಿವಾಹವನ್ನು ಡಾ. ಜೆ. ರಾಧಾಕೃಷ್ಣನ್ ನೆರವೇರಿಸಿಕೊಟ್ಟಿದ್ದಾರೆ. ವಿವಾಹ ಸಮಾರಂಭದಲ್ಲಿ ಮೀನಾ ಜೊತೆಗೆ ಪಾಲನಾ ಕೇಂದ್ರದಲ್ಲಿ ಜೊತೆಗಿದ್ದ ಇತರ ಸ್ನೇಹಿತರು ಕೂಡ ಭಾಗವಹಿಸಿದ್ದರು.
ಈ ಕುರಿತು ಡಾ. ಜೆ. ರಾಧಾಕೃಷ್ಣನ್ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ʼನಾಗಪಟ್ಟಣದಲ್ಲಿ ಹೃದಯಸ್ಪರ್ಶಿ ಪುನರ್ಮಿಲನ. ಇಂದು ನಾಗಪಟ್ಟಣದಲ್ಲಿ ಮೀನಾ ಮತ್ತು ಮಣಿಮಾರನ್ ಅವರ ವಿವಾಹದ ಭಾಗವಾಗಲು ಸಂತೋಷವಾಗಿದೆ. ನಾಗೈ ಮಕ್ಕಳೊಂದಿಗೆ ನಮ್ಮ ಸುನಾಮಿ ನಂತರದ ಪ್ರಯಾಣವು ಯಾವಾಗಲೂ ಭರವಸೆಯದ್ದಾಗಿದೆ. ಅವರು ಬೆಳೆದು, ಅಧ್ಯಯನ ಮಾಡಿ, ಪದವಿ ಪಡೆದು, ಈಗ ಸುಂದರ ಜೀವನದಲ್ಲಿ ನೆಲೆಸುವುದನ್ನು ನೋಡುವುದು ಆನಂದ ತರಿಸಿದೆ. ಸೌಮ್ಯ, ಸುಭಾಷ್ ಮತ್ತು ಪುಟ್ಟ ಸಾರಾ ತಮ್ಮ ಆತ್ಮೀಯ ಸ್ನೇಹಿತಳ ವಿಶೇಷ ದಿನವನ್ನು ಆಚರಿಸುತ್ತಿರುವುದನ್ನು ನೋಡಿ ಸಂತೋಷವಾಯಿತು. ಇದು ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನ, ರಕ್ತಸಂಬಂಧಗಳನ್ನು ಮೀರಿ ಬೆಳೆದ ಕುಟುಂಬʼ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ಜೊತೆಗೆ ವಿವಾಹ ಸಮಾರಂಭದ ಕೆಲವು ಕ್ಷಣಗಳನ್ನು ಮತ್ತು ಮೀನಾ ಬಾಲಕಿಯಾಗಿದ್ದಾಗ ತನ್ನ ತೋಳುಗಳಲ್ಲಿದ್ದ ಹಳೆಯ ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.
ಈ ಕುರಿತ ಡಾ.ಜೆ. ರಾಧಾಕೃಷ್ಣನ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಐಎಎಸ್ ಅಧಿಕಾರಿ ಬಗ್ಗೆ ಜನರು ವ್ಯಾಪಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.