ಅಮರಾವತಿ ಸ್ಥಳೀಯ ಸಂಸ್ಥೆ ಚುನಾವಣೆ: ನವನೀತ್ ರಾಣಾ ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿಯ 22 ಅಭ್ಯರ್ಥಿಗಳು

Photo Credit: The Hindu
ಅಮರಾವತಿ (ಮಹಾರಾಷ್ಟ್ರ): ಇತ್ತೀಚೆಗೆ ಮುಕ್ತಾಯಗೊಂಡ ಅಮರಾವತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಸಂಸದೆ ನವನೀತ್ ರಾಣಾ ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಬಿಜೆಪಿಯ 22 ಅಭ್ಯರ್ಥಿಗಳು ಆರೋಪಿಸಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ.
ದೂರು ನೀಡಿರುವ 22 ಅಭ್ಯರ್ಥಿಗಳ ಪೈಕಿ 20 ಅಭ್ಯರ್ಥಿಗಳು ಜನವರಿ 15ರಂದು ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರೆ, ಇಬ್ಬರು ಮಾತ್ರ ಜಯಶೀಲರಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳನ್ನು ಡಮ್ಮಿಗಳು ಎಂದು ಮಾಜಿ ಸಂಸದೆ ನವನೀತ್ ರಾಣಾ ಆಕ್ರಮಣಕಾರಿ ಪ್ರಚಾರ ಮಾಡಿದ್ದು, ತಮ್ಮ ಪತಿ ರವಿ ರಾಣಾರ ಯುವ ಸ್ವಾಭಿಮಾನ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ನೈಜ ಬಿಜೆಪಿ ಅಭ್ಯರ್ಥಿಗಳು ಎಂದು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದಕ್ಕೂ ಮುನ್ನ, ಬಿಜೆಪಿ ಹಾಗೂ ಶಾಸಕ ರವಿ ರಾಣಾರ ಯುವ ಸ್ವಾಭಿಮಾನ್ ಪಕ್ಷದ ನಡುವಿನ ಮೈತ್ರಿ ಮುರಿದು ಬಿದ್ದಿತ್ತು. ಹೀಗಿದ್ದೂ, ನವನೀತ್ ರಾಣಾ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ಹೇಳಿಕೆ ನೀಡಿದ್ದರು.
85 ಸದಸ್ಯ ಬಲದ ಅಮರಾವತಿ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳು, ಕಾಂಗ್ರೆಸ್ ಹಾಗೂ ಯುವ ಸ್ವಾಭಿಮಾನ್ ಪಕ್ಷ ತಲಾ 15 ಸ್ಥಾನಗಳು, ಎಐಎಂಐಎಂ 12 ಸ್ಥಾನಗಳು, ಎನ್ಸಿಪಿ 11 ಸ್ಥಾನಗಳು, ಶಿವಸೇನೆ ಮತ್ತು ಬಿಎಸ್ಪಿ ತಲಾ 3 ಸ್ಥಾನಗಳು, ಶಿವಸೇನೆ (ಉದ್ಧವ್ ಬಣ) 2 ಸ್ಥಾನಗಳು ಹಾಗೂ ವಂಚಿತ್ ಬಹುಜನ್ ಅಘಾಡಿ ಪಕ್ಷ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿವೆ.
ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 85 ಸ್ಥಾನಗಳು ಹಾಗೂ ಯುವ ಸ್ವಾಭಿಮಾನ್ ಪಕ್ಷ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡು ಮನನೊಂದಿರುವ ಬಿಜೆಪಿಯ 20 ಅಭ್ಯರ್ಥಿಗಳು ಹಾಗೂ ಇಬ್ಬರು ವಿಜೇತ ಅಭ್ಯರ್ಥಿಗಳು ಶನಿವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದು, ಈ ನಷ್ಟ ಜನರಿಂದ ಆಗಿರುವುದಲ್ಲ, ಬದಲಿಗೆ ನವನೀತ್ ರಾಣಾರಿಂದ ಆಗಿರುವುದು ಎಂದು ಆರೋಪಿಸಿದ್ದಾರೆ.







