ನಟಿ ಸೌಂದರ್ಯ ಮೃತಪಟ್ಟ ಎರಡು ದಶಕಗಳ ಬಳಿಕ ಖ್ಯಾತ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲು

ನಟಿ ಸೌಂದರ್ಯ (Photo credit: reddit.com)
ಖಮ್ಮಂ (ಆಂಧ್ರಪ್ರದೇಶ): ಖ್ಯಾತ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಮೃತಪಟ್ಟು ಎರಡು ದಶಕಗಳಾಗುತ್ತಾ ಬಂದಿದೆ. ಆದರೆ, ಇದೀಗ ಅವರ ಸಾವು ಅಪಘಾತದಿಂದ ಸಂಭವಿಸಿಲ್ಲ, ಬದಲಿಗೆ, ತೆಲುಗಿನ ಹಿರಿಯ ನಟ ಮೋಹನ್ ಬಾಬುರೊಂದಿಗೆ ಹೊಂದಿದ್ದ ಆಸ್ತಿ ವ್ಯಾಜ್ಯಕ್ಕಾಗಿ ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಿ ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.
ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿರುವ ದೂರುದಾರ ಚಿಟ್ಟಿಮಲ್ಲು, ಶಂಶಾಬಾದ್ ನ ಗ್ರಾಮವೊಂದರಲ್ಲಿನ ಆರು ಎಕರೆ ಜಮೀನನ್ನು ಮಾರಾಟ ಮಾಡುವಂತೆ ಸೌಂದರ್ಯ ಹಾಗೂ ಅವರ ಸಹೋದರನ ಮೇಲೆ ನಟ ಮೋಹನ್ ಬಾಬು ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಅವರಿಬ್ಬರೂ ಅದಕ್ಕೆ ಒಪ್ಪದೆ ಇದ್ದುದರಿಂದ, ಸೌಂದರ್ಯ ಹಾಗೂ ಮೋಹನ್ ಬಾಬು ನಡುವೆ ವೈಮನಸ್ಸು ಸೃಷ್ಟಿಯಾಗಿತ್ತು. ಸೌಂದರ್ಯ ಮೃತಪಟ್ಟ ನಂತರ, ಅವರ ಜಮೀನನ್ನು ನಟ ಮೋಹನ್ ಬಾಬು ಬಲವಂತದಿಂದ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದೂ ಅವರು ದೂರಿದ್ದಾರೆ.
ಆದರೆ, ಈವರೆಗೆ ಈ ಕುರಿತು ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಇದರೊಂದಿಗೆ, ದೂರದಾರನು ಸೌಂದರ್ಯ ಹಾಗೂ ಮೋಹನ್ ಬಾಬು ನಡುವೆ ಹೊಂದಿರುವ ಸಂಬಂಧ ಯಾವ ಬಗೆಯದು ಎಂಬುದಿನ್ನೂ ತಿಳಿದು ಬಂದಿಲ್ಲ.
ಕನ್ನಡದ ‘ಆಪ್ತಮಿತ್ರ’ ಹಾಗೂ ಅಮಿತಾಭ್ ಬಚ್ಚನ್ ರೊಂದಿಗಿನ ‘ಸೂರ್ಯವಂಶಂ’ ಬಾಲಿವುಡ್ ಚಿತ್ರದ ಮೂಲಕ ಇಡೀ ದೇಶದಲ್ಲೇ ಮನೆಮಾತಾಗಿದ್ದ ನಟಿ ಸೌಂದರ್ಯ, ಎಪ್ರಿಲ್ 17, 2004ರಂದು ಕರೀಂನಗರದಲ್ಲಿ ಆಯೋಜನೆಗೊಂಡಿದ್ದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಾಸಗಿ ಜೆಟ್ ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದರು.