'24 ಗಂಟೆಗಳು ಕಳೆದಿವೆ, ಮೋದಿ ಜೀ': ಮುಕ್ತ ಚರ್ಚೆಗೆ ಪ್ರಧಾನಿಗೆ ರಾಹುಲ್ ಮತ್ತೆ ಸವಾಲು
►ಅಮೆರಿಕದೊಂದಿಗಿನ ಒಪ್ಪಂದ, ಅದಾನಿ ಪ್ರಕರಣ, ಎಪ್ಸ್ಟೀನ್ ನಂಟಿನ ಬಗ್ಗೆ ಚರ್ಚೆಗೆ ಆಹ್ವಾನ ►ತೀರ್ಪುಗಾರರಾಗಿ ಮೋಹನ್ ಭಾಗವತ್ ಅವರನ್ನೇ ನೇಮಿಸುವಂತೆ ಸಲಹೆ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: "24 ಗಂಟೆಗಳು ಕಳೆದಿವೆ, ಮೋದಿ ಜೀ... ಇನ್ನೂ ಏಕೆ ಚರ್ಚೆಗೆ ಬರುತ್ತಿಲ್ಲ?" ಎಂದು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಕ್ತ ಚರ್ಚೆಯ ಸವಾಲನ್ನು ಮತ್ತೊಮ್ಮೆ ಹಾಕಿದ್ದಾರೆ. ವಿದೇಶಿ ಸಂಪರ್ಕಗಳ ಕುರಿತು ತಮ್ಮ ಆರೋಪಗಳಿಗೆ ಉತ್ತರ ನೀಡುವಂತೆ ಒತ್ತಾಯಿಸಿರುವ ಅವರು, ಚರ್ಚೆಗೆ ಪ್ರಧಾನಿ ಅವರೇ ವೇದಿಕೆ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಿ ಎಂದಿದ್ದಾರೆ.
ದೀಪಾವಳಿ ಶುಭಾಶಯ ಕೋರುವ ನೆಪದಲ್ಲಿ ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ವೀಡಿಯೋ ಬಿಡುಗಡೆ ಮಾಡಿರುವ ರಾಹುಲ್, ತಮ್ಮ ಹಿಂದಿನ ಸವಾಲಿಗೆ 24 ಗಂಟೆಗಳು ಕಳೆದಿವೆ ಎಂದು ನೆನಪಿಸಿದ್ದಾರೆ.
'ಎಕ್ಸ್'ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ, "ಮೋದಿ ಜೀ, 24 ಗಂಟೆಗಳು ಕಳೆದಿವೆ. ನಾನು ನಿಮಗೆ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ವಿರೋಧ ಪಕ್ಷದವರು ದೇಶವಿರೋಧಿಗಳು ಎಂದು ನೀವು ಹೇಳುತ್ತೀರಿ. ಹಾಗಿದ್ದರೆ, ನಿಮಗೆ ಇಷ್ಟವಾದ ವೇದಿಕೆ ಅಥವಾ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ನನ್ನೊಂದಿಗೆ ಚರ್ಚೆಗೆ ಬನ್ನಿ" ಎಂದು ಹೇಳಿದ್ದಾರೆ.
"ದೇಶವಿರೋಧಿಗಳು ಯಾರು? ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರು ಯಾರು? ಅಂತಹ ಸಂಪರ್ಕಗಳ ಸ್ವರೂಪವೇನು? ಹಿಂಜರಿಯಬೇಡಿ, ಆದಷ್ಟು ಬೇಗ ಚರ್ಚೆಗೆ ಬನ್ನಿ" ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿ ಅವರು ವಿದೇಶಿ ನೆರವಿನಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂಬ ಆರೋಪದ ಕುರಿತು ರಾಹುಲ್ ಈ ಹಿಂದೆ ಮುಕ್ತ ಚರ್ಚೆಗೆ ಆಹ್ವಾನಿಸಿದ್ದರು. ಮೋದಿ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರುವುದಿಲ್ಲ ಎಂದೂ ಅವರು ಟೀಕಿಸಿದ್ದಾರೆ.
ಚರ್ಚೆಯಲ್ಲಿ ಇಬ್ಬರೂ ನಾಯಕರು ಒಂದೇ ಮೇಜಿನ ಎದುರು ಕುಳಿತು ತಮ್ಮ ವಾದಗಳನ್ನು ಮಂಡಿಸಬೇಕು. ಮಾಧ್ಯಮಗಳು ಮತ್ತು ದೇಶದ ಯುವಜನರು ಚರ್ಚೆಗೆ ಸಾಕ್ಷಿಯಾಗಬೇಕು ಎಂಬುದು ರಾಹುಲ್ ಅವರ ಪ್ರಸ್ತಾಪ. ಚರ್ಚೆಯ ತೀರ್ಪುಗಾರರನ್ನು ಪ್ರಧಾನಿ ಮೋದಿಯೇ ಆಯ್ಕೆ ಮಾಡಬಹುದು. ಬೇಕಿದ್ದರೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ನೇಮಿಸಬಹುದು ಎಂದೂ ಅವರು ಹೇಳಿದ್ದಾರೆ.
"ನಾವಿಬ್ಬರೂ ಒಂದೇ ಮೇಜಿನ ಎದುರು ಕುಳಿತು ಚರ್ಚೆ ನಡೆಸೋಣ. ಮಾಧ್ಯಮಗಳು ಮತ್ತು ದೇಶದ ಯುವಜನರು ಇರಲಿ. ನಿಮಗೆ ಯಾರನ್ನು ತೀರ್ಪುಗಾರರನ್ನಾಗಿ ನೇಮಿಸಬೇಕೆನಿಸುತ್ತದೆಯೋ ಅವರನ್ನು ಆಯ್ಕೆ ಮಾಡಿ. ಮೋಹನ್ ಭಾಗವತ್ ಅವರನ್ನೇ ಆ ಸ್ಥಾನದಲ್ಲಿ ಕೂರಿಸಿದರೂ ನನ್ನ ಅಭ್ಯಂತರವಿಲ್ಲ. ಬನ್ನಿ, ಚರ್ಚೆ ನಡೆಸೋಣ" ಎಂದು ರಾಹುಲ್ ಹೇಳಿದ್ದಾರೆ.
►ಅಮೆರಿಕ ಒಪ್ಪಂದದಿಂದ ಅದಾನಿ ಪ್ರಕರಣದವರೆಗೆ ಚರ್ಚೆಗೆ ಆಹ್ವಾನ
ಚರ್ಚೆಯಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳನ್ನೂ ರಾಹುಲ್ ಪಟ್ಟಿ ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತು ಹಣಕಾಸು ರಚನೆ, ಅಮೆರಿಕದೊಂದಿಗಿನ ಒಪ್ಪಂದ, ಅದಾನಿ ಪ್ರಕರಣ ಹಾಗೂ ಜೆಫ್ರಿ ಎಪ್ಸ್ಟೀನ್ ಪ್ರಕರಣಗಳ ಕುರಿತು ಚರ್ಚಿಸೋಣ ಎಂದು ಅವರು ಹೇಳಿದ್ದಾರೆ.
"ಅಮೆರಿಕದೊಂದಿಗಿನ ಒಪ್ಪಂದ ಹೇಗೆ ನಡೆಯಿತು? ಏಕೆ ನಡೆಯಿತು? ಅಷ್ಟು ತ್ವರಿತವಾಗಿ ಒಪ್ಪಂದ ಮಾಡಿಕೊಳ್ಳುವ ಅಗತ್ಯವೇನಿತ್ತು? ಈ ನಿರ್ಧಾರವನ್ನು ಪ್ರಧಾನಿ ಏಕೆ ಏಕಾಂಗಿಯಾಗಿ ತೆಗೆದುಕೊಂಡರು? ಸಂಪುಟಕ್ಕೆ ಏಕೆ ಮಾಹಿತಿ ನೀಡಲಿಲ್ಲ? ಅದಾನಿ ಪ್ರಕರಣವನ್ನು ಏಕೆ ಮುಚ್ಚಲಾಯಿತು? ಎಪ್ಸ್ಟೀನ್ ಪ್ರಕರಣದ ಬಗ್ಗೆಯೂ ಚರ್ಚಿಸೋಣ. ದೇಶದ ಹಣಕಾಸು ವ್ಯವಸ್ಥೆ ಮತ್ತು ಅದರ ರಚನೆಯ ಬಗ್ಗೆಯೂ ಮಾತನಾಡೋಣ" ಎಂದು ರಾಹುಲ್ ಹೇಳಿದ್ದಾರೆ.
"ಧೈರ್ಯವಾಗಿ ಬನ್ನಿ, ಹೆದರಬೇಡಿ. ಚರ್ಚೆಯಿಂದ ಸತ್ಯ ಹೊರಬರಲಿ. ಸತ್ಯ ಮತ್ತು ಸುಳ್ಳು ಯಾವುದು ಎಂಬುದು ಸ್ಪಷ್ಟವಾಗಲಿ" ಎಂದು ಅವರು ಹೇಳಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗಳನ್ನೂ ಪ್ರಸ್ತಾಪಿಸಿರುವ ರಾಹುಲ್, ವಿದೇಶಿ ಸಂಪರ್ಕಗಳ ಕುರಿತ ತಮ್ಮ ಆರೋಪದ ಬಗ್ಗೆಯೂ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಪ್ರಧಾನಿಗೆ ಸವಾಲು ಹಾಕಿದ್ದಾರೆ.
"ನೀವು ನನ್ನ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದೀರಿ. ಇತರ ವಿಷಯಗಳಿಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ಹೂಡಿದ್ದೀರಿ. ಬಹುಶಃ ನನ್ನ ವಿರುದ್ಧ ಸುಮಾರು 45 ಮಾನನಷ್ಟ ಮೊಕದ್ದಮೆಗಳಿವೆ. ಆದರೆ, ವಿದೇಶಿ ಸಂಪರ್ಕಗಳ ಕುರಿತ ನನ್ನ ಆರೋಪದ ಬಗ್ಗೆ ಮಾತ್ರ ನೀವು ಮೊಕದ್ದಮೆ ದಾಖಲಿಸಿಲ್ಲ. ಧೈರ್ಯವಿದ್ದರೆ ಈ ವಿಚಾರದಲ್ಲೂ ಮೊಕದ್ದಮೆ ಹೂಡಿ. ಅದರ ಬಗ್ಗೆಯೂ ಮುಕ್ತ ಚರ್ಚೆ ನಡೆಸೋಣ" ಎಂದು ಹೇಳಿದ್ದಾರೆ.
ಚರ್ಚೆಯನ್ನು ಆದಷ್ಟು ಬೇಗ ನಡೆಸುವಂತೆ ಒತ್ತಾಯಿಸಿರುವ ರಾಹುಲ್, "ಹೆದರಬೇಡಿ, ಆದಷ್ಟು ಬೇಗ ಚರ್ಚೆ ನಡೆಸೋಣ" ಎಂದು ಹೇಳಿ ವೀಡಿಯೋ ಮುಕ್ತಾಯಗೊಳಿಸಿದ್ದಾರೆ. ಕೊನೆಯಲ್ಲಿ ಪ್ರಧಾನಿ ಮೋದಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
►ರಾಹುಲ್ಗೆ ರಿಜಿಜು ತಿರುಗೇಟು
ಪ್ರಧಾನಿ ಮೋದಿ ಅವರು 'ವಿದೇಶಿ ನೆರವಿನಿಂದ' ಪ್ರಧಾನಿಯಾದರು ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರವಾಗಿ ಟೀಕಿಸಿದ್ದಾರೆ. ರಿಜಿಜು ಅವರ ಟೀಕೆಯ ಕೆಲವೇ ಗಂಟೆಗಳ ಬಳಿಕ ರಾಹುಲ್ ಮತ್ತೆ ಮುಕ್ತ ಚರ್ಚೆಯ ಸವಾಲು ಹಾಕಿದ್ದಾರೆ.
ರಾಹುಲ್ ಅವರ ಹೇಳಿಕೆಗಳನ್ನು ಟೀಕಿಸಿರುವ ರಿಜಿಜು, ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಮಾತನಾಡುವುದಕ್ಕೆ ಮತ್ತು ಪ್ರತ್ಯೇಕತಾವಾದಿಗಳು ಭಾರತೀಯ ಧ್ವಜ ಹಿಡಿಯುವುದಕ್ಕೆ ಹೋಲಿಕೆ ಮಾಡಿದ್ದಾರೆ.
'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, " ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಮಾತನಾಡುವುದು, ಪ್ರತ್ಯೇಕತಾವಾದಿಗಳು ಭಾರತೀಯ ಧ್ವಜ ಹಿಡಿಯುವುದು ಒಂದೇ ರೀತಿಯಾಗಿದೆ. ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸುವವರು ಅರಾಜಕತಾವಾದಿಗಳು. ಭಾರತದ ಶತ್ರುಗಳ ಕಾರ್ಯಸೂಚಿಯನ್ನು ಮುಂದಿಡುತ್ತಲೇ ಇತರರ ಮೇಲೆ ವಿದೇಶಿ ಬೆಂಬಲದ ಆರೋಪ ಮಾಡುವುದು ಹಾಸ್ಯಾಸ್ಪದ" ಎಂದು ಹೇಳಿದ್ದಾರೆ.
"ಉನ್ನತ ಮಟ್ಟದ ಚರ್ಚೆಗಳು ಪ್ರಬುದ್ಧ ವ್ಯಕ್ತಿಗಳ ನಡುವೆ ನಡೆಯುತ್ತವೆ" ಎಂದು ರಿಜಿಜು ರಾಹುಲ್ ಗೆ ತಿರುಗೇಟು ನೀಡಿದ್ದಾರೆ.






