ಒಂಭತ್ತು ವರ್ಷಗಳಲ್ಲಿ ದೇಶದ 24.82 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ: ನೀತಿ ಆಯೋಗ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : 2013-14ರಿಂದ 2022-23ರವರೆಗಿನ ಒಂಭತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹುಆಯಾಮಗಳ ಬಡತನದಿಂದ ಹೊರಕ್ಕೆ ಬಂದಿದ್ದು,ಈ ವಿಷಯದಲ್ಲಿ ಉತ್ತರ ಪ್ರದೇಶ,ಬಿಹಾರ ಮತ್ತು ಮಧ್ಯಪ್ರದೇಶ ಅಗ್ರಸ್ಥಾನಗಳಲ್ಲಿವೆ ಎಂದು ನೀತಿ ಆಯೋಗವು ಸೋಮವಾರ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ ಭಾರತದಲ್ಲಿ ಬಹುಆಯಾಮಗಳ ಬಡತನವು 2013-14ರಲ್ಲಿನ ಶೇ.29.17ರಿಂದ 2022-23ರಲ್ಲಿ ಶೇ.11.28ಕ್ಕೆ ಇಳಿಕೆಯಾಗಿದ್ದು,ಸುಮಾರು 24.82 ಕೋಟಿ ಜನರು ಬಹುಆಯಾಮಗಳ ಬಡತನದಿಂದ ಹೊರಕ್ಕೆ ಬಂದಿದ್ದಾರೆ.
ರಾಷ್ಟ್ರೀಯ ಬಹುಆಯಾಮಗಳ ಬಡತನವು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ; ಈ ಮೂರು ಸಮಾನ ತೂಕದ ಆಯಾಮಗಳಲ್ಲಿ ಏಕಕಾಲಿಕ ಕೊರತೆಯನ್ನು ಅಳೆಯುತ್ತದೆ. ಇವುಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಸಲಾದ 12 ಸೂಚಕಗಳು ಪ್ರತಿನಿಧಿಸುತ್ತವೆ ಎಂದು ನೀತಿ ಆಯೋಗವು ವರದಿಯಲ್ಲಿ ವಿವರಿಸಿದೆ.
ಇವುಗಳಲ್ಲಿ ಪೌಷ್ಟಿಕತೆ,ಮಗು ಮತ್ತು ಹದಿಹರೆಯದವರ ಸಾವುಗಳು, ತಾಯಿಯ ಆರೋಗ್ಯ,ಶಾಲಾ ಶಿಕ್ಷಣದ ವರ್ಷಗಳು,ಶಾಲಾ ಹಾಜರಾತಿ, ಅಡಿಗೆ ಇಂಧನ,ನೈರ್ಮಲ್ಯ,ಕುಡಿಯುವ ನೀರು,ವಿದ್ಯುತ್,ವಸತಿ,ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ.
ರಾಜ್ಯಮಟ್ಟದಲ್ಲಿ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದ್ದು,ಅಲ್ಲಿ 5.94 ಕೋಟಿ ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ. ಬಿಹಾರ (3.77 ಕೋಟಿ) ಮತ್ತು ಮಧ್ಯಪ್ರದೇಶ (2.30 ಕೋಟಿ) ನಂತರದ ಸ್ಥಾನಗಳಲ್ಲಿವೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ ರಮೇಶ ಚಂದ್ ಅವರು,ಒಂಭತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹುಆಯಾಮಗಳ ಬಡತನದಿಂದ ಹೊರಕ್ಕೆ ಬಂದಿದ್ದಾರೆ. ಅಂದರೆ ವಾರ್ಷಿಕವಾಗಿ 2.75 ಕೋಟಿ ಜನರು ಬಹುಆಯಾಮಗಳ ಬಡತನದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಸರಕಾರವು ಬಹುಆಯಾಮಗಳ ಬಡತನವನ್ನು ಶೇ.1ಕ್ಕಿಂತ ಕೆಳಕ್ಕೆ ತರುವ ಗುರಿಯನ್ನು ಹೊಂದಿದೆ ಮತ್ತು ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.