Uttar Pradesh | ಮದುವೆ ಮೆರವಣಿಗೆ ವೇಳೆ ಡಿಜೆ ಮೂಲಕ ಅಂಬೇಡ್ಕರ್ ಹಾಡುಗಳನ್ನು ಹಾಕಿದ್ದಕ್ಕೆ ವಿವಾದ; ದಲಿತ ವರನನ್ನು ಕುದುರೆಯಿಂದ ಕೆಳಕ್ಕೆ ಎಳೆದು ಹಲ್ಲೆ

ಸಾಂದರ್ಭಿಕ ಚಿತ್ರ (AI Imagined)
ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಮದುವೆ ಮೆರವಣಿಗೆ ವೇಳೆ ಡಿಜೆ ಮೂಲಕ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಹಾಡುಗಳನ್ನು ಹಾಕಿದ್ದಕ್ಕೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ದಲಿತ ವರನನ್ನು ಕುದುರೆಯಿಂದ ಕೆಳಕ್ಕೆ ಎಳೆದು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ನಾಗ್ಲಾ ವೀರ್ಭಾನ್ ಗ್ರಾಮದಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಪ್ರಕರಣದಲ್ಲಿ ಹೆಸರಿಸಲಾದ 8 ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಗುರುವಾರ ರಾತ್ರಿ ಆಗ್ರಾ ನಗರದ ಮಲ್ಪುರಾ ಪ್ರದೇಶದಿಂದ ಮದುವೆ ಮೆರವಣಿಗೆ ನಾಗ್ಲಾ ವೀರ್ಭಾನ್ ಗ್ರಾಮಕ್ಕೆ ಆಗಮಿಸಿತ್ತು. ಮೆರವಣಿಗೆಯು ವಧುವಿನ ಮನೆ ಕಡೆಗೆ ಸಾಗುತ್ತಿದ್ದಾಗ ಡಿಜೆ ಮೂಲಕ ಡಾ. ಭೀಮರಾವ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳಿಗೆ ಸಂಬಂಧಿಸಿದ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಈ ವೇಳೆ ಮೇಲ್ಜಾತಿ ಸಮುದಾಯಕ್ಕೆ ಸೇರಿದ ಕನ್ಹಾ, ಶಿವಂ, ಭೀಕಂ, ಸಚಿನ್, ಪಂಕಜ್, ಸುಮಿತ್, ಸತ್ಯಂ ಮತ್ತು ನಂದಿ ಎಂಬ ಎಂಟು ಮಂದಿ ಮತ್ತು ಇತರ 20ರಿಂದ 25 ಮಂದಿ ಮದುವೆ ಮೆರವಣಿಗೆಯನ್ನು ತಡೆದು ಸಂಗೀತವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಆರೋಪಿಗಳು ವರನನ್ನು ಕುದುರೆಯಿಂದ ಕೆಳಕ್ಕೆ ಎಳೆದು ಹಲ್ಲೆ ನಡೆಸಿದ್ದಾರೆ. ಡಾ. ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹರಿದು ಹಾಕಿದ್ದಾರೆ. ಮದುವೆ ಮೆರವಣಿಗೆಯಲ್ಲಿದ್ದ ಇತರರ ಮೇಲೆಯೂ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ಬಳಿಕ ವಧುವಿನ ಕುಟುಂಬದವರಿಗೆ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಹೇಳಿದ್ದೇನು?
ಜಾಗ್ನರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ವೀರ್ಭಾನ್ನಲ್ಲಿ ಗುರುವಾರ ರಾತ್ರಿ ಮದುವೆ ಮೆರವಣಿಗೆಯ ವೇಳೆ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿದೆ. ವಿವಾದದ ಬಗ್ಗೆ ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಜಾಗ್ನರ್ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಂದು ಆಗ್ರಾ ಹೆಚ್ಚುವರಿ ಪೊಲೀಸ್ ಆಯುಕ್ತ ಸಚೀಂದ್ರ ಪಟೇಲ್ ತಿಳಿಸಿದ್ದಾರೆ.
ವಧುವಿನ ತಂದೆ ಜಾಗ್ನರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ 8 ಮಂದಿಯನ್ನು ಹೆಸರಿಸಿದ್ದಾರೆ. ಉಳಿದ 20 ರಿಂದ 25 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಎಲ್ಲರೂ ಮೇಲ್ಜಾತಿಗೆ ಸೇರಿದವರು ಎಂದು ಹೇಳಲಾಗಿದೆ.
ಘಟನೆಯ ಬಳಿಕ ಪೊಲೀಸರು ಗ್ರಾಮಕ್ಕೆ ಧಾವಿಸಿದ್ದು, ಶುಕ್ರವಾರ ಮಧ್ಯಾಹ್ನದವರೆಗೆ ಪೊಲೀಸ್ ಭದ್ರತೆಯಲ್ಲಿ ಮದುವೆ ಕಾರ್ಯಕ್ರಮ ನೆರವೇರಿದೆ.
ಶುಕ್ರವಾರ ಜಾಗ್ನರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 191, 126(2), 115(2), 352, 131, 351(3) ಹಾಗೂ 324(4) ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.
ದಲಿತ ಸಮುದಾಯದ ಮದುವೆ ಮೆರವಣಿಗೆಯ ಮೇಲೆ ನಡೆದಿರುವ ದಾಳಿಯನ್ನು ಆಝಾದ್ ಸಮಾಜ್ ಪಾರ್ಟಿ ನಾಯಕ ಚಂದ್ರಶೇಖರ್ ಆಝಾದ್ ಅವರು ಖಂಡಿಸಿದ್ದಾರೆ.






