ಪುಣೆ | ಮೆಟ್ರೋ ಪಿಲ್ಲರ್ಗೆ ಕಾರು ಢಿಕ್ಕಿ: ಮೂವರು ಮೃತ್ಯು

ಸಾಂದರ್ಭಿಕ ಚಿತ್ರ
ಪುಣೆ: ವೇಗವಾಗಿ ಬರುತ್ತಿದ್ದ ಕಾರೊಂದು ಪುಣೆ ಮೆಟ್ರೊ ರೈಲು ನಿಲ್ದಾಣದ ಸ್ತಂಭಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸೋದರ ಸಂಬಂಧಿಗಳು ಮತ್ತು ಇನ್ನೋರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಸ್ತಂಭಕ್ಕೆ ಢಿಕ್ಕಿ ಹೊಡೆಯುವ ಮುನ್ನ ಕಾರು ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದೆ. ನಜ್ಜುಗುಜ್ಜಾದ ಕಾರಿನ ಹಿಂಬದಿಯ ಗಾಜು ಒಡೆದಿದ್ದು, ಮೂವರ ಪೈಕಿ ಒರ್ವನ ಮೃತದೇಹ ನೇತಾಡುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತಿದೆ.
ಮೃತಪಟ್ಟ ಇಬ್ಬರನ್ನು ಯಶ್ ಭಂಡಾರಿ ಮತ್ತು ಹೃತಿಕ್ ಭಂಡಾರಿ ಎಂದು ಗುರುತಿಸಲಾಗಿದೆ. ದುರಂತದಲ್ಲಿ ಜೀವ ಕಳೆದುಕೊಂಡ ಮತ್ತೊರ್ವ ವ್ಯಕ್ತಿ ಕುಶ್ವಂತ್ ಟೇಕ್ವಾನಿ ತೀವ್ರ ಗಾಯಗೊಂಡಿದ್ದು, ಇವರು ಸಸೂನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆರಂಭಿಕ ತನಿಖೆಯಿಂದ ತಿಳಿದು ಬಂದಂತೆ ಕಾರಿನಲ್ಲಿದ್ದ ವ್ಯಕ್ತಿಗಳು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದರು ಹಾಗೂ ನಿಯಂತ್ರಣ ಕಳೆದುಕೊಂಡ ಕಾರು ಢಿಕ್ಕಿ ಹೊಡೆಯಿತು. ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.





