‘ವಿವೊ’ ಕಪ್ಪು ಹಣ ಬಿಳುಪು ಪ್ರಕರಣ: ನಾಲ್ವರು ಆರೋಪಿಗಳಿಗೆ ಈಡಿ ಕಸ್ಟಡಿ

ಹೊಸದಿಲ್ಲಿ: ಚೀನಿ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ವಿವೋ ವಿರುದ್ಧದ ಕಪ್ರುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಲಾವಾ ಇಂಟರ್ನ್ಯಾಶನಲ್ ಮೊಬೈಲ್ ಕಂಪೆನಿಯ ಆಡಳಿತ ನಿರ್ದೇಶಕ ಹಾಗೂ ಓರ್ವ ಚೀನಿ ಪ್ರಜೆ ಸೇರಿದಂತೆ ನಾಲ್ವರನ್ನು ಸ್ಥಳೀಯ ನ್ಯಾಯಾಲಯವು ಅಕ್ಟೋಬರ್ 13ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಗಳನ್ನು ತನ್ನ ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಈಡಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ದೇವೇಂದ್ರ ಕುಮಾರ್ ಜಂಗಾಲಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಲಾವಾ ಇಂಟರ್ನ್ಯಾಶನಲ್ ಕಂಪೆನಿಯ ಹರಿ ಓಂ ರಾಯ್, ಗುರ್ಗಾಂವ್ ನಿವಾಸಿ ಚೀನಿ ಪ್ರಜೆ ಆ್ಯಂಡ್ರ್ಯೂ ಕುವಾಂಗ್, ಚಾರ್ಟಡ್ ಅಕೌಂಟೆಂಟ್ಗಳಾದ ನಿತಿನ್ ಗಾರ್ಗ್ ಹಾಗೂ ರಾಜನ್ ಮಲಿಕ್ ಎಂದು ಗುರುತಿಸಲಾಗಿದೆ.
ಆರೋಪಿಗಳ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ನಿತೇಶ್ ರಾಣಾ ಅವರು, ಜಾರಿ ನಿರ್ದೇಶನಾಲಯದ ಅರ್ಜಿಯನ್ನು ವಿರೋಧಿಸಿದರು. ಆರೋಪಿಗಳ ವಿರುದ್ಧ ಈ.ಡಿ. ಮಾಡಿರುವ ಆರೋಪಗಳು ಸುಳ್ಳು ಹಾಗೂ ಸೂಕ್ತ ಪುರಾವೆಗಳಿಲ್ಲವೆಂದು ಹೇಳಿದರು.
ನ್ಯಾಯಾಲಯದ ಆದೇಶದಂತೆ ಈ ನಾಲ್ವರು ಆರೋಪಿಗಳನ್ನು ಕಪ್ಪುಹಣ ಬಿಳುಪು ಕಾಯ್ದೆ (ಪಿಎಂಎಲ್ಎ)ಯ ನಿಯಮಗಳಡಿ ಶುಕ್ರವಾರದ ವರೆಗೆ ಜಾರಿನ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಯಿತು.
ಭಾರತದಲ್ಲಿ ತೆರಿಗೆ ಪಾವತಿಯನ್ನು ತಪ್ಪಿಸುವ ಉದ್ದೇಶದಿಂದ ವಿವೋ ಕಂಪೆನಿಯು ಸುಮಾರು 62,476 ಕೋಟಿ ರೂ.ಗಳನ್ನು ಅಕ್ರಮವಾಗಿ ಚೀನಾಗೆ ವರ್ಗಾಯಿಸಿದೆಯೆಂದು ಜಾರಿ ನಿರ್ದೇಶನಾಲಯ ಆಪಾದಿಸಿತ್ತು.







