2024ರಲ್ಲಿ 4.87 ಲಕ್ಷ ರಸ್ತೆ ಅಪಘಾತ; ಪ್ರತಿ ಗಂಟೆಗೆ 20 ಮಂದಿ ಮೃತ್ಯು: ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ 2024ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಶೇ 1.48ರಷ್ಟು ಹೆಚ್ಚಳವಾಗಿ 4,87,707ಕ್ಕೆ ತಲುಪಿದೆ. ಈ ಅಪಘಾತಗಳಲ್ಲಿ 1,77,175 ಮಂದಿ ಮೃತಪಟ್ಟಿದ್ದು, 4,71,441 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ತಿಳಿಸಿದೆ.
‘ಭಾರತದಲ್ಲಿ ರಸ್ತೆ ಅಪಘಾತಗಳು–2024’ ವರದಿ ಪ್ರಕಾರ, ದೇಶದಲ್ಲಿ ಸರಾಸರಿ ಪ್ರತಿ ಗಂಟೆಗೆ 56 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 20 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂದರೆ, ಪ್ರತಿ ಮೂರು ನಿಮಿಷಕ್ಕೊಮ್ಮೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ.
ರಸ್ತೆ ಅಪಘಾತಗಳಲ್ಲಿ ಭಾಗಿಯಾಗಿರುವ ವಾಹನಗಳ ಪೈಕಿ ದ್ವಿಚಕ್ರ ವಾಹನಗಳ ಪ್ರಮಾಣವೇ ಹೆಚ್ಚಾಗಿದೆ. ಒಟ್ಟು ರಸ್ತೆ ಸಾವುಗಳಲ್ಲಿ ದ್ವಿಚಕ್ರ ವಾಹನ ಸವಾರರ ಪಾಲು ಶೇ 46.2ರಷ್ಟಿದ್ದರೆ, ಪಾದಚಾರಿಗಳ ಪಾಲು ಶೇ 20.6 ಹಾಗೂ ಕಾರು, ಟ್ಯಾಕ್ಸಿ, ವ್ಯಾನ್ ಮತ್ತು ಇತರ ಲಘು ಮೋಟಾರು ವಾಹನ ಬಳಕೆದಾರರ ಪಾಲು ಶೇ 12.4ರಷ್ಟಿದೆ.
ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ ಅತಿ ಹೆಚ್ಚು 67,526 ರಸ್ತೆ ಅಪಘಾತಗಳು ದಾಖಲಾಗಿವೆ. ರಸ್ತೆ ಅಪಘಾತ ಸಾವುಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, 24,118 ಮಂದಿ ಮೃತಪಟ್ಟಿದ್ದಾರೆ.
2024ರಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ 1,50,958 ಅಪಘಾತಗಳು (ಶೇ 31) ಸಂಭವಿಸಿವೆ. ರಾಜ್ಯ ಹೆದ್ದಾರಿಗಳಲ್ಲಿ 1,03,538 ಅಪಘಾತಗಳು (ಶೇ 21.2) ಹಾಗೂ ಇತರ ರಸ್ತೆಗಳಲ್ಲಿ 2,33,211 ಅಪಘಾತಗಳು (ಶೇ 47.8) ದಾಖಲಾಗಿವೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ 64,772 ಮಂದಿ (ಶೇ 36.6), ರಾಜ್ಯ ಹೆದ್ದಾರಿಗಳಲ್ಲಿ 39,277 ಮಂದಿ (ಶೇ 22.2) ಮತ್ತು ಇತರ ರಸ್ತೆಗಳಲ್ಲಿ 73,126 ಮಂದಿ (ಶೇ 41.3) ಮೃತಪಟ್ಟಿದ್ದಾರೆ.
ಒಟ್ಟು 1,64,378 ಮಾರಕ ರಸ್ತೆ ಅಪಘಾತಗಳ ಪೈಕಿ 59,043 ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ, 36,392 ಅಪಘಾತಗಳು ರಾಜ್ಯ ಹೆದ್ದಾರಿಗಳಲ್ಲಿ ಹಾಗೂ 68,943 ಅಪಘಾತಗಳು ಇತರ ರಸ್ತೆಗಳಲ್ಲಿ ಸಂಭವಿಸಿವೆ ಎಂದು ವರದಿ ತಿಳಿಸಿದೆ.






