ದಿಲ್ಲಿಯ 5 ಶಾಲೆಗಳಿಗೆ ಬಾಂಬ್ ಬೆದರಿಕೆ : ಪೊಲೀಸರಿಂದ ಪರಿಶೀಲನೆ

Photo | NDTV
ಹೊಸದಿಲ್ಲಿ : ದಿಲ್ಲಿಯ 5 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 7.15ರ ಸುಮಾರಿಗೆ ಸೇಂಟ್ ಸ್ಟೀಫನ್ಸ್ ಕಾಲೇಜಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಕಾಲೇಜಿನ ಆವರಣ ಮತ್ತು ಗ್ರಂಥಾಲಯದಲ್ಲಿ ಐಇಡಿ ಬಾಂಬ್ಗಳು ಮತ್ತು ಎರಡು ಆರ್ಡಿಎಕ್ಸ್ಗಳನ್ನು ಇರಿಸಲಾಗಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಅವುಗಳು ಸ್ಫೋಟಗೊಳ್ಳಲಿದೆ ಎಂದು ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ತಂಡಗಳು ಶಾಲೆಗೆ ತೆರಳಿ ಪರಿಶೀಲನೆ ನಡೆಸಿದೆ. ಇಲ್ಲಿಯವರೆಗೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ʼದ್ವಾರಕಾದ ಸೇಂಟ್ ಥಾಮಸ್ ಶಾಲೆ, ವಸಂತ್ ಕುಂಜ್ನ ವಸಂತ್ ವ್ಯಾಲಿ ಶಾಲೆ, ಹೌಝ್ ಖಾಸ್ನಲ್ಲಿರುವ ಮದರ್ ಇಂಟರ್ನ್ಯಾಷನಲ್ ಶಾಲೆ, ಪಶ್ಚಿಮ ವಿಹಾರ್ನಲ್ಲಿರುವ ರಿಚ್ಮಂಡ್ ಗ್ಲೋಬಲ್ ಶಾಲೆ ಮತ್ತು ಲೋದಿ ಎಸ್ಟೇಟ್ನ ಸರ್ದಾರ್ ಪಟೇಲ್ ವಿದ್ಯಾಲಯಕ್ಕೆ ಇಂದು ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ಕಳೆದ ಮೂರು ದಿನಗಳಲ್ಲಿ ಸುಮಾರು 10 ಶಾಲೆಗಳು ಮತ್ತು ಒಂದು ಕಾಲೇಜಿಗೆ ಇಂತಹ ಬಾಂಬ್ ಬೆದರಿಕೆಗಳು ಬಂದಿವೆʼ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.





