5 ವರ್ಷದ ಪುತ್ರಿಯನ್ನು ಕೊಲೆ ಮಾಡಿ ನಾಲ್ಕು ತುಂಡುಗಳಾಗಿ ಕತ್ತರಿಸಿದ ತಂದೆ! : ಸೀತಾಪುರ ಬಾಲಕಿ ನಾಪತ್ತೆ ಪ್ರಕರಣಕ್ಕೆ ತಿರುವು

Photo | NDTV
ಸೀತಾಪುರ: ಉತ್ತರಪ್ರದೇಶದ ಸೀತಾಪುರದಲ್ಲಿ ವ್ಯಕ್ತಿಯೋರ್ವ ತನ್ನ ಐದು ವರ್ಷದ ಪುತ್ರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿದ ಘಟನೆ ನಡೆದಿದೆ.
ಏನಿದು ಘಟನೆ?
ಸೀತಾಪುರದಲ್ಲಿ ಐದರ ಹರೆಯದ ಬಾಲಕಿ ತಾನಿ ನಾಪತ್ತೆಯಾಗಿದ್ದಳು. ಈ ಕುರಿತು ಆಕೆಯ ತಂದೆ ಮೋಹಿತ್ ಮಿಶ್ರಾ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಬಾಲಕಿಯ ನಾಪತ್ತೆ ಕುರಿತು ಪ್ರಕರಣವನ್ನು ದಾಖಲಿಸಿ ಹುಡುಕಾಟ ನಡೆಸಿದಾಗ ಬಾಲಕಿಯ ದೇಹದ ತುಂಡುಗಳು ಪತ್ತೆಯಾದವು. ಆರಂಭದಲ್ಲಿ ಬಾಲಕಿಯ ಮೇಲೆ ಪ್ರಾಣಿಗಳು ದಾಳಿ ಮಾಡಿರುವ ಬಗ್ಗೆ ಶಂಕಿಸಲಾಗಿತ್ತು ಆದರೆ, ಬಾಲಕಿಯ ಕುಟುಂಬ ಇದು ಕೊಲೆ ಕೃತ್ಯವಾಗಿದ್ದು, ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದರು. ಈ ವೇಳೆ ಬಾಲಕಿಯ ತಂದೆ ಮೋಹಿತ್ ಮಿಶ್ರ ಕೃತ್ಯವನ್ನು ಎಸಗಿರುವುದು ಬಹಿರಂಗವಾಗಿದೆ.
ಪೊಲೀಸರು ಹೇಳಿದ್ದೇನು?
ಘಟನೆ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಸಿಂಗ್ ಪ್ರತಿಕ್ರಿಯಿಸಿ, ಫೆಬ್ರವರಿ 25ರಂದು ನನ್ನ ಮಗು ಮನೆಯ ಸಮೀಪದಿಂದ ನಾಪತ್ತೆಯಾಗಿದೆ ಎಂದು ಮೋಹಿತ್ ದೂರು ನೀಡಿದ್ದಾನೆ. ನಾವು ಪ್ರಕರಣವನ್ನು ದಾಖಲಿಸಿ 4 ತಂಡಗಳನ್ನು ರಚಿಸಿ ಬಾಲಕಿಗೆ ಹುಡುಕಾಟ ನಡೆಸಿದಾಗ ಆಕೆಯ ದೇಹದ ಭಾಗವೊಂದು ಪತ್ತೆಯಾಗಿತ್ತು. ಮರುದಿನ ಬಾಲಕಿಯ ದೇಹದ ಇತರ ಭಾಗಗಳು ಪತ್ತೆಯಾಗಿವೆ. ತನಿಖೆಯ ಭಾಗವಾಗಿ ಕೆಲವರನ್ನು ವಿಚಾರಣೆ ನಡೆಸುತ್ತಿದ್ದಾಗ ಬಾಲಕಿಯ ತಂದೆ ದಿಢೀರ್ ನಾಪತ್ತೆಯಾಗಿದ್ದಾನೆ. ಈತ ಮನೆಯಿಂದ ತೆರಳುವಾಗ ತನ್ನ ಫೋನ್ ಅನ್ನು ಪತ್ನಿಗೆ ನೀಡಿದ್ದ, ಮಗು ಕಾಣೆಯಾಗುವ ಮೊದಲು ನಡೆದ ಘಟನೆಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದರು. ಆ ಬಳಿಕ ಮೋಹಿತ್ ಮಿಶ್ರಾ ಮತ್ತೆ ಕಾಣಿಸಿಕೊಂಡಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಪುತ್ರಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ಪಕ್ಕದ ಮನೆಗೆ ಆಟವಾಡಲು ಹೋಗಿದ್ದಕ್ಕೆ ಮಗುವಿನ ಕೊಲೆ!
ಮೋಹಿತ್ ಕುಟುಂಬ ಮತ್ತು ಪಕ್ಕದ ರಾಮುವಿನ ಕುಟುಂಬ ಮೊದಲು ಬಹಳ ಆತ್ಮೀಯವಾಗಿತ್ತು. ಇವರು ಪರಸ್ಪರ ಮನೆಗೆ ಭೇಟಿ ನೀಡುತ್ತಿದ್ದರು. ಕೆಲವು ದಿನಗಳ ಹಿಂದೆ ಎರಡು ಕುಟುಂಬದವರು ಜಗಳವಾಡಿ ಒಬ್ಬರನ್ನೊಬ್ಬರು ಭೇಟಿ ಮಾಡುವುದನ್ನು ನಿಲ್ಲಿಸಿದರು. ಮೋಹಿತ್ ತನ್ನ ಪುತ್ರಿಗೆ ರಾಮುವಿನ ಮನೆಗೆ ಹೋಗದಂತೆ ಪದೇ ಪದೇ ಹೇಳುತ್ತಿದ್ದ. ಆದರೆ ಪುಟ್ಟ ಬಾಲಕಿ ಅಲ್ಲಿಗೆ ಆಟವಾಡಲು ಹೋಗುತ್ತಿದ್ದಳು. ಘಟನೆ ನಡೆದ ದಿನ ರಾಮು ಮನೆಯಿಂದ ಪುತ್ರಿ ತಾನಿ ಬರುವುದನ್ನು ಗಮನಿಸಿದ ಮೋಹಿತ್ ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ನಿರ್ಜನ ಸ್ಥಳಕ್ಕೆ ಕರೆದೊಯ್ದು ಬಟ್ಟೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಗದ್ದೆಯಲ್ಲಿ ಎಸೆದಿದ್ದಾನೆ.







