5,000 ಸಿಬ್ಬಂದಿ, ವಾಟರ್ ಕ್ಯಾನನ್ಗಳು: ಸಿಜೆಪಿಯ ʼಚಲೋ ಸಂಸದ್ʼ ತಡೆಯಲು ದಿಲ್ಲಿ ಪೊಲೀಸ್ ಬಿಗಿ ಭದ್ರತೆ

Photo: screengrab/x.com/ANI
ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು ಕಾಕ್ರೋಚ್ ಜನತಾ ಪಾರ್ಟಿ ʼಚಲೋ ಸಂಸದ್ʼ ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು 5,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಬೃಹತ್ ಭದ್ರತಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ ಮತ್ತು ಅತಿಸೂಕ್ಷ್ಮ ಪ್ರದೇಶದಲ್ಲಿ ತೀವ್ರ ಕಣ್ಗಾವಲು ಏರ್ಪಡಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ರಾಷ್ಟ್ರ ರಾಜಧಾನಿಯ ಅತಿಸೂಕ್ಷ್ಮ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ಕಟ್ಟುನಿಟ್ಟುಗೊಳಿಸಲಾಗಿದ್ದು, ಪ್ರಮುಖ ಸರ್ಕಾರಿ ಸಂಸ್ಥೆಗಳು ಹಾಗೂ ಪ್ರದೇಶಗಳನ್ನು ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಬೇಕು ಮತ್ತು ನೀಟ್ ಪರೀಕ್ಷಾ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಂತರ್ ಮಂತರ್ನಿಂದ ಸಂಸತ್ತಿನವರೆಗೆ 'ಚಲೋ ಸಂಸದ್' ಮೆರವಣಿಗೆಗೆ ಸಿಜೆಪಿ ಕರೆ ನೀಡಿದೆ. ಈ ಉದ್ದೇಶಿತ ಮೆರವಣಿಗೆಯು ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದೇ ನಡೆಯುತ್ತಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಉಂಟಾಗದಂತೆ ಮತ್ತು ಭದ್ರತಾ ಲೋಪವಾಗದಂತೆ ತಡೆಯಲು ದಿಲ್ಲಿ ಪೊಲೀಸರು ಗುಪ್ತಚರ ಸಂಸ್ಥೆಗಳ ಸಂಯೋಜನೆಯೊಂದಿಗೆ ಸಮಗ್ರ ಕಾರ್ಯಾಚರಣೆ ಯೋಜನೆಯನ್ನು ರೂಪಿಸಿದ್ದಾರೆ ಎಂದು ಲಭ್ಯ ಮಾಹಿತಿಯ ಆಧಾರದ ಮೇಲೆ ಇಂಡಿಯಾ ಟುಡೇ ವರದಿ ಮಾಡಿದೆ.
ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿರುವ, ನಿರ್ಗಮಿಸುತ್ತಿರುವ ಮತ್ತು ತಂಗಿರುವ ಪ್ರತಿಭಟನಾಕಾರರ ಸಂಖ್ಯೆಯ ಕುರಿತು ಪ್ರತಿ ಗಂಟೆಯ ವರದಿಯನ್ನು ಗುಪ್ತಚರ ಸಂಸ್ಥೆಗಳು ಹಾಗೂ ದಿಲ್ಲಿ ಪೊಲೀಸ್ ನ ಸ್ಪೆಷಲ್ ಬ್ರಾಂಚ್ ಹಿರಿಯ ಅಧಿಕಾರಿಗಳಿಗೆ ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಬೆಳಿಗ್ಗೆ 4 ಗಂಟೆಯಿಂದಲೇ ರಾಜಧಾನಿಯಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರದಲ್ಲಿದ್ದಾರೆ. ದಿಲ್ಲಿಯಾದ್ಯಂತ 5,000ಕ್ಕೂ ಹೆಚ್ಚು ದಿಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮಹಿಳಾ ಸಿಬ್ಬಂದಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 25ಕ್ಕೂ ಹೆಚ್ಚು ಬೆಟಾಲಿಯನ್ಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಹೊಸದಿಲ್ಲಿಯನ್ನು 15 ಭದ್ರತಾ ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ವಲಯವನ್ನು ಹಿರಿಯ ಅಧಿಕಾರಿಗಳ ಉಸ್ತುವಾರಿಗೆ ಒಪ್ಪಿಸಲಾಗಿದೆ. ಭದ್ರತಾ ಸಿಬ್ಬಂದಿಯ ನಿಯೋಜನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸ್ಥಳೀಯ ಸನ್ನಿವೇಶಗಳಿಗೆ ಅನುಗುಣವಾಗಿ ಕೆಲಸ ಮಾಡಲು ವಿಶೇಷ ಪೊಲೀಸ್ ಕಮಿಷನರ್ಗಳು, ಜಂಟಿ ಕಮಿಷನರ್ಗಳು ಮತ್ತು ಉಪ ಪೊಲೀಸ್ ಕಮಿಷನರ್ಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ತಿಳಿದುಬಂದಿದೆ.
ವಿಜಯ್ ಚೌಕ್, ಪಾರ್ಲಿಮೆಂಟ್ ಸ್ಟ್ರೀಟ್, ಪ್ರಧಾನಮಂತ್ರಿಯವರ ಅಧಿಕೃತ ನಿವಾಸ, ಸೇವಾ ತೀರ್ಥ, ಸೆಲ್ಫಿ ಪಾಯಿಂಟ್, ಸಾರಿಗೆ ಭವನ, ರಾಷ್ಟ್ರಪತಿ ಭವನ, ಇಂಡಿಯಾ ಗೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಹಲವು ಅತಿಸೂಕ್ಷ್ಮ ಪ್ರದೇಶಗಳನ್ನು ಸಭೆ ಅಥವಾ ಪ್ರತಿಭಟನೆಗಳಿಗೆ ನಿಷೇಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಸಾಧ್ಯತೆ
ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ ನಿಗ್ರಹ ಪಡೆಗಳ ವಜ್ರ ವಾಹನಗಳು, ವಾಟರ್ ಕ್ಯಾನನ್ಗಳು ಮತ್ತು ಇತರ ವಿಶೇಷ ಉಪಕರಣಗಳನ್ನು ನಿಯೋಜಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕ್ಷಿಪ್ರ ಕಾರ್ಯಪಡೆ ಮತ್ತು ಮೀಸಲು ಪಡೆಗಳನ್ನು ಸಹ ಸಜ್ಜಾಗಿಡಲಾಗಿದೆ. ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಭದ್ರತಾ ಪರಿಸ್ಥಿತಿಯನ್ನು ಆಧರಿಸಿ ಅಗತ್ಯಬಿದ್ದರೆ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಯಾವುದೇ ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸಲು ಹತ್ತಿರದ ಆಸ್ಪತ್ರೆಗಳನ್ನೂ ಸಹ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ. ರಾಜಧಾನಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಸೇರಿದಂತೆ ಇತರ ಪ್ರಮುಖ ಸರ್ಕಾರಿ ಹಾಗೂ ಪ್ರಮುಖ ಸಂಸ್ಥೆಗಳ ಬಳಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದಿಲ್ಲಿ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲಿ ಪೊಲೀಸರು ವಾಹನ ತಪಾಸಣೆಯನ್ನು ತೀವ್ರಗೊಳಿಸಿದ್ದು, ಆಗಮಿಸುವ ಪ್ರತಿಯೊಂದು ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಹೊಸದಿಲ್ಲಿ, ಸೆಂಟ್ರಲ್ ದಿಲ್ಲಿ ಮತ್ತು ಉತ್ತರ ದಿಲ್ಲಿಯ ಕೆಲವು ಭಾಗಗಳಲ್ಲಿ ಬಹುಸ್ತರದ ಬ್ಯಾರಿಕೇಡ್ಗಳು, ಸಿಸಿಟಿವಿ ಕಣ್ಗಾವಲು ಮತ್ತು 24 ಗಂಟೆಗಳ ಗಸ್ತು ವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಉಪ ಪೊಲೀಸ್ ಕಮಿಷನರ್ ಸಚಿನ್ ಶರ್ಮಾ, ಉದ್ದೇಶಿತ ಸಂಸತ್ ಮೆರವಣಿಗೆಗೆ ಯಾವುದೇ ಅನುಮತಿಯನ್ನು ಕೋರಲಾಗಿಲ್ಲ ಅಥವಾ ನೀಡಲಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಈ ವ್ಯಾಪಕ ಭದ್ರತಾ ನಿಯೋಜನೆಯನ್ನು ಮಾಡಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆಗಳು ಹೊಸದಿಲ್ಲಿಯಾದ್ಯಂತ ಜಾರಿಯಲ್ಲಿವೆ ಎಂದು ತಿಳಿಸಿದ್ದಾರೆ.
ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಾಗಿರುವ ಹೋರಾಟಗಾರ ಸೋನಮ್ ವಾಂಗ್ಚುಕ್, ಸಂಸತ್ ಮೆರವಣಿಗೆಯನ್ನು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿಸುವಂತೆ ಬೆಂಬಲಿಗರಿಗೆ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಕೂಡ ಪ್ರತಿಭಟನಾಕಾರರು ಶಾಂತಿ ಕಾಪಾಡಿಕೊಳ್ಳಬೇಕು ಮತ್ತು ಪೊಲೀಸರ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ವಿನಂತಿಸಿದ್ದಾರೆ.






