ಮಧ್ಯಪ್ರದೇಶ | 4 ನಿಮಿಷದಲ್ಲಿ 52 ಬಾರಿ ಕ್ಷಮೆಯಾಚಿಸಿದರೂ ಕ್ಷಮಿಸದ ಪ್ರಾಂಶುಪಾಲ : ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ; ಸ್ಥಿತಿ ಗಂಭೀರ

Photo | NDTV
ಭೋಪಾಲ್: ಶಾಲಾ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿಗೆ ನಾಲ್ಕು ನಿಮಿಷಗಳಲ್ಲಿ 52 ಬಾರಿ ಕ್ಷಮೆಯಾಚಿಸಿದರೂ, ಪ್ರಾಂಶುಪಾಲರು ಕ್ಷಮಿಸದ ಕಾರಣ ಮನನೊಂದು 8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ ಮೂರನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ದೊಂಗ್ರೆ ನಗರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಪಟುವಾದ 8ನೇ ತರಗತಿ ವಿದ್ಯಾರ್ಥಿಯು ಶಾಲೆಗೆ ಮೊಬೈಲ್ ತಂದು ತರಗತಿಯ ಚಟುವಟಿಕೆಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವೀಡಿಯೊ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬಂದು ಶಾಲಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಆತನ ಪೋಷಕರನ್ನು ಶಾಲೆಗೆ ಕರೆಸಿಕೊಳ್ಳಲಾಗಿದೆ. ಈ ವೇಳೆ ಬಾಲಕ ಗಾಬರಿಯಿಂದ ಕೇವಲ ನಾಲ್ಕು ನಿಮಿಷದಲ್ಲಿ 52 ಬಾರಿ ಪ್ರಾಂಶುಪಾಲರ ಬಳಿ ಕ್ಷಮೆ ಕೋರಿದ್ದಾನೆ. ಆದರೆ ಆತನ ಕ್ಷಮಾಪಣೆಯನ್ನು ನಿರ್ಲಕ್ಷಿಸಿರುವ ಪ್ರಾಂಶುಪಾಲರು, ಆತನನ್ನು ಶಾಲೆಯಿಂದ ಅಮಾನತುಗೊಳಿಸಿದ್ದಾರೆ ಹಾಗೂ ಆತನ ಪದಕಗಳನ್ನು ಮನೆಗೆ ಕೊಂಡೊಯ್ಯುವಂತೆ ಆತನಿಗೆ ಸೂಚಿಸಿದ್ದಾರೆ.
ಇದರಿಂದ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಕ್ರೀಡಾಕೂಟವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಆ ಬಾಲಕನು ಅಳತೊಡಗಿದ್ದಾನೆ. ಪ್ರಾಂಶುಪಾಲರ ಕಚೇರಿಯಿಂದ ಹೊರಗೋಡಿ ಬಂದು ಶಾಲಾ ಕಟ್ಟಡದ ಮೂರನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಘಟನೆಯ ಬೆನ್ನಿಗೆ, ಶಾಲಾ ಆಡಳಿತ ಮಂಡಳಿಯ ಅತಿರೇಕದ ವರ್ತನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.







