ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 20 ತಿಂಗಳಲ್ಲಿ ಒಡಿಶಾದಲ್ಲಿ 54 ಕೋಮು ಗಲಭೆಗಳು, 7 ಗುಂಪು ಹಲ್ಲೆ ಪ್ರಕರಣಗಳು!

ಮೋಹನ್ ಚರಣ್ ಮಾಝಿ | Photo Credit : PTI
ಭುವನೇಶ್ವರ: ಜೂನ್ 2024ರಿಂದ ಫೆಬ್ರವರಿ 2026ರವರೆಗೆ ಕಳೆದ 20 ತಿಂಗಳ ಅವಧಿಯಲ್ಲಿ ಒಡಿಶಾದಲ್ಲಿ 54 ಕೋಮು ಗಲಭೆಗಳು ಹಾಗೂ ಏಳು ಗುಂಪು ಹಲ್ಲೆ ಘಟನೆಗಳು ವರದಿಯಾಗಿವೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ವಿಧಾನಸಭೆಗೆ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದರು. ಈ ಅವಧಿಯಲ್ಲಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ 298 ಜನರನ್ನು ಹಾಗೂ ಗುಂಪು ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ 61 ಜನರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.
ಬಿಜೆಡಿ ಶಾಸಕ ಗೌತಮ್ ಬುದ್ಧ ದಾಸ್ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಜೂನ್ 2024ರಿಂದ ಫೆಬ್ರವರಿ 2026ರವರೆಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೋಮು ಗಲಭೆ ಮತ್ತು ಗುಂಪು ಹಲ್ಲೆ ಪ್ರಕರಣಗಳ ವಿವರಗಳನ್ನು ಸದನಕ್ಕೆ ಸಲ್ಲಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರವು 2024ರ ಜೂನ್ 12ರಂದು ಅಧಿಕಾರ ವಹಿಸಿಕೊಂಡಿತ್ತು.
ಭದ್ರಕ್, ಮಲ್ಕಂಗಿರಿ, ಬಾಲಸೋರ್, ಕೊರಾಪುಟ್ ಮತ್ತು ಖುರ್ದಾ ಜಿಲ್ಲೆಗಳಲ್ಲಿ ಒಟ್ಟು 54 ಕೋಮುಗಲಭೆ ಘಟನೆಗಳು ವರದಿಯಾಗಿವೆ. ಹಾಗೆಯೇ ದಿಯೋಗಢ, ಧೆಂಕನಾಲ್, ಬಾಲಸೋರ್ ಮತ್ತು ರಾಯಗಡ ಜಿಲ್ಲೆಗಳಲ್ಲಿ ಏಳು ಗುಂಪು ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಸಿಎಂ ಮಾಹಿತಿ ನೀಡಿದರು.
20 ತಿಂಗಳ ಅವಧಿಯಲ್ಲಿ ಕೋಮು ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ 298 ಜನರನ್ನು ಹಾಗೂ ಗುಂಪು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ 61 ಜನರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಬಾಲಸೋರ್ ಜಿಲ್ಲೆಯಲ್ಲಿ 24 ಕೋಮು ಗಲಭೆ ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ 95 ಜನರನ್ನು ಬಂಧಿಸಲಾಗಿದೆ. ಖುರ್ದಾ ಜಿಲ್ಲೆಯಲ್ಲಿ 16 ಪ್ರಕರಣಗಳು ದಾಖಲಾಗಿದ್ದು, 120 ಜನರನ್ನು ಬಂಧಿಸಲಾಗಿದೆ. ಕೊರಾಪುಟ್ ಜಿಲ್ಲೆಯಲ್ಲಿ ವರದಿಯಾದ ಎಂಟು ಗಲಭೆ ಪ್ರಕರಣಗಳಿಗೆ ಸಂಬಂಧಿಸಿ 33 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಎಂ ಮಾಝಿ ಹೇಳಿದರು.
ಇದೇ ಅವಧಿಯಲ್ಲಿ ಮಲ್ಕಂಗಿರಿ ಜಿಲ್ಲೆಯಲ್ಲಿ ನಾಲ್ಕು ಹಾಗೂ ಭದ್ರಕ್ ಜಿಲ್ಲೆಯಲ್ಲಿ ಎರಡು ಗಲಭೆ ಪ್ರಕರಣಗಳು ದಾಖಲಾಗಿವೆ. ಮಲ್ಕಂಗಿರಿಯಲ್ಲಿ ನಡೆದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ 26 ಜನರನ್ನು ಬಂಧಿಸಲಾಗಿದ್ದು, ಭದ್ರಕ್ ಜಿಲ್ಲೆಯಲ್ಲಿ ಎರಡು ಪ್ರಕರಣಗಳಿಗೆ ಸಂಬಂಧಿಸಿ 24 ಜನರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗುಂಪು ಹಲ್ಲೆ ಪ್ರಕರಣಗಳ ವಿಚಾರದಲ್ಲಿ ರಾಯಗಡ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು 48 ಜನರನ್ನು ಬಂಧಿಸಲಾಗಿದೆ. ಧೆಂಕನಾಲ್ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದರೂ ಯಾವುದೇ ಬಂಧನವಾಗಿಲ್ಲ. ದಿಯೋಗಢ ಜಿಲ್ಲೆಯಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ಬಾಲಸೋರ್ ಜಿಲ್ಲೆಯಲ್ಲಿ ಒಂದು ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕೋಮು ಗಲಭೆ ಮತ್ತು ಗುಂಪು ಹಲ್ಲೆ ಘಟನೆಗಳನ್ನು ತಡೆಯಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶಾಂತಿ ಸಮಿತಿಗಳನ್ನು ರಚಿಸಲಾಗಿದೆ. ಸಮುದಾಯಗಳ ನಡುವಿನ ಸಾಮರಸ್ಯ ಕಾಪಾಡಲು ಸ್ಥಳೀಯ ಆಡಳಿತವು ಕ್ರಮಗಳನ್ನು ಕೈಗೊಂಡಿದ್ದು, ಶಾಂತಿ ಮತ್ತು ಸೌಹಾರ್ದತೆಯನ್ನು ಭಂಗಪಡಿಸಲು ಯತ್ನಿಸುವವರ ವಿರುದ್ಧ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಹೇಳಿದರು.
ಕಾನೂನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುವುದು ಮತ್ತು ಬಂಧಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಮಾಟಮಂತ್ರದ ಶಂಕೆಯ ಮೇಲೆ ನಡೆಯುವ ಗುಂಪು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಇಂತಹ ಘಟನೆಗಳನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.







