ಮಹಾರಾಷ್ಟ್ರ: 57 ಸ್ಥಳೀಯ ಸಂಸ್ಥೆಗಳ ಫಲಿತಾಂಶ ಬಂದರೂ ಆಡಳಿತ ಚುಕ್ಕಾಣಿಗೆ ಕಾಯುವ ಸ್ಥಿತಿ..

PC: x.com/the_hindu
ಪುಣೆ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದರೂ, 57 ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸುಪ್ರೀಂಕೋರ್ಟ್ ನ ತೀರ್ಪಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟು 288 ನಗರಸಭೆ ಮತ್ತು ನಗರಪಂಚಾಯ್ತಿಗಳ ಪೈಕಿ 57 ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೀಡಿದ ಮೀಸಲಾತಿ ಪ್ರಮಾಣ 50% ಮೀರಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ಬಗ್ಗೆ ಜನವರಿ 21ರಂದು ತೀರ್ಪು ಹೊರಬೀಳಲಿದೆ. ಆಡಳಿತಾರೂಢ ಮಹಾಯುತಿ ಸರ್ಕಾರ ಬಹುಮತ ಸಾಧಿಸಿದ 39 ಹಾಗೂ ಎಂವಿಎ ಹೆಚ್ಚು ಸ್ಥಾನಗಳನ್ನು ಗೆದ್ದಿರುವ 17 ಸ್ಥಳೀಯ ಸಂಸ್ಥೆಗಳು ಇದರಲ್ಲಿ ಸೇರಿವೆ. ಒಂದು ಸ್ಥಳೀಯ ಸಂಸ್ಥೆ ಇತರ ಪಕ್ಷಗಳ ಪಾಲಾಗಿದೆ.
ಕೋಟಾ ಮಿತಿಯನ್ನು ಉಲ್ಲಂಘಿಸಿರುವ ವಿರುದ್ಧ ಸಲ್ಲಿಸಲಾಗಿರುವ ಹಲವು ಅರ್ಜಿಗಳ ಬಗ್ಗೆ ಕ್ರಮ ಕೈಗೊಂಡಿರುವ ಸುಪ್ರೀಂಕೋರ್ಟ್, "ಈ 57 ಸ್ಥಳೀಯ ಸಂಸ್ಥೆಗಳ ಚುನಾವಣೆಯು ಸುಪ್ರೀಂಕೋರ್ಟಿನ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ" ಎಂದು ನವೆಂಬರ್ 29ರಂದು ಆದೇಶಿಸಿತ್ತು. ಈ ಸ್ಥಳೀಯ ಸಂಸ್ಥೆಗಳ ಸದಸ್ಯ ಹುದ್ದೆಗಳ ಫಲಿತಾಂಶದ ಮೇಲೆಯೂ ಪರಿಣಾಮ ಬೀರಲಿದೆ.
"ಈ ಸಂಸ್ಥೆಗಳ ಫಲಿತಾಂಶ ಘೋಷಣೆಯಾಗಿದ್ದರೂ, ಇದು ಅಂತಿಮ ಆದೇಶಕ್ಕೆ ಅನುಸಾರವಾಗಿರುತ್ತದೆ" ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯಲ್ಲಿ ಮಹಾಯುತಿ ಕೂಟಕ್ಕೆ ಭಾರಿ ಬಹುಮತ ಬಂದಿದ್ದರೂ, 39 ಸ್ಥಾನಗಳ ಗೆಲುವಿನ ಬಗ್ಗೆ ಸ್ಪಷ್ಟನೆಗೆ ಕಾಯಬೇಕಾದ ಸ್ಥಿತಿ ಇದೆ. ಈ ಪೈಕಿ ಬಿಜೆಪಿ 30, ಶಿವಸೇನೆ ಐದು, ಎನ್ಸಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿವೆ. ಆದರೆ ಎಂವಿಗೆ ಕೂಡಾ ಇದೇ ಸ್ಥಿತಿ ಇದ್ದು, ಕಾಂಗ್ರೆಸ್ ನ 17, ಶಿವಸೇನೆ-ಯುಬಿಟಿ2 ಎರಡು ಹಾಗೂ ಎನ್ಸಿಪಿ-ಎಸ್ಪಿ ಗೆದ್ದಿರುವ ನಾಲ್ಕು ಸ್ಥಾನಗಳ ಅಂತಿಮ ಫಲಿತಾಂಶ ತೂಗುಯ್ಯಾಲೆಯಲ್ಲಿದೆ. "ಜನಾದೇಶ ಸ್ಪಷ್ಟವಾಗಿ ಮಹಾಯುತಿ ಪರವಾಗಿದೆ. ಆದರೆ ಸುಪ್ರೀಂಕೋರ್ಟ್ ನ ತೀರ್ಪನ್ನು ನಾವು ಗೌರವಿಸುತ್ತೇವೆ" ಎಂದು ಬಿಜೆಪಿ ರಾಜಕಾರಣಿಯೊಬ್ಬರು ಹೇಳಿದ್ದಾರೆ.
"ನಮ್ಮ ಒಟ್ಟು ಸ್ಥಾನಗಳ ಪೈಕಿ ಐದನೇ ಮೂರರಷ್ಟು ಸ್ಥಾನಗಳು ಪರಿಶೀಲನೆಗೆ ಒಳಪಟ್ಟಿವೆ. ಇದು ತಳಮಟ್ಟದಲ್ಲಿ ಜನಾದೇಶವನ್ನು ಪ್ರತಿಬಿಂಬಿಸುತ್ತದೆ ಹಾಗೂ ಸುಪ್ರೀಂಕೋರ್ಟ್ ಸ್ಥಿರತೆಯನ್ನು ಖಾತರಿಪಡಿಸುತ್ತದೆ ಹಾಗೂ ಈ ಸಂಸ್ಥೆಗಳನ್ನು ಅಸ್ಥಿರಗೊಳಿಸುವುದಿಲ್ಲ ಎಂಬ ನಿರೀಕ್ಷೆ ನಮ್ಮದು" ಎಂದು ಕಾಂಗ್ರೆಸ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ 39 ಸ್ಥಳೀಯ ಸಂಸ್ಥೆಗಳ ಪೈಕಿ ನಾಗ್ಪುರ ಜಿಲ್ಲೆಯ ಎಂಟು, ಚಂದ್ರಾಪುರ ಜಿಲ್ಲೆಯ ಏಳು ಹಾಗೂ ನಾಸಿಕ್ ನ ಐದು ಸ್ಥಳೀಯ ಸಂಸ್ಥೆಗಳು ಸೇರಿವೆ.







