ಕೇಂದ್ರ ಗೃಹ ಸಚಿವರು, ಗೃಹ ಕಾರ್ಯದರ್ಶಿ ಕುರಿತ ಪೋಸ್ಟ್ ಬಗ್ಗೆಯೇ ಶೇ. 60-70ರಷ್ಟು ಪ್ರಶ್ನೆಗಳನ್ನು ಕೇಳಲಾಯಿತು: ವಿಚಾರಣೆಯ ಬಳಿಕ ಮಾಜಿ ನಾಗರಿಕ ಸೇವಾ ಅಧಿಕಾರಿ ಆಶಿಶ್ ಜೋಶಿ

Photo: x.com/IndianExpress
ಹೊಸದಿಲ್ಲಿ: ದಿಲ್ಲಿ ಪೊಲೀಸರ ವಿಶೇಷ ದಳ (ಸ್ಪೆಷಲ್ ಸೆಲ್) ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ ಮರುದಿನವೇ ಮಾಜಿ ನಾಗರಿಕ ಸೇವಾ ಅಧಿಕಾರಿ ಆಶಿಶ್ ಜೋಶಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಿಸಿದಂತೆ ಆಗಸ್ಟ್ 26ರಂದು ‘ಎಕ್ಸ್’ನಲ್ಲಿ ಮಾಡಿದ್ದ ಪೋಸ್ಟ್ಗೆ ಸಂಬಂಧಿಸಿ ತಮಗೆ ಸಮನ್ಸ್ ನೀಡಲಾಗಿತ್ತು. ಆದರೆ, ವಿಚಾರಣೆಯ ಬಹುಪಾಲು ಸಮಯವನ್ನು ಕೇಂದ್ರ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ನಡುವೆ ನಡೆದಿದೆ ಎನ್ನಲಾದ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದ ತಮ್ಮ ಹಿಂದಿನ ಪೋಸ್ಟ್ ಕುರಿತು ಪ್ರಶ್ನಿಸಲು ಬಳಸಲಾಯಿತು ಎಂದು ಅವರು ಗುರುವಾರ ತಿಳಿಸಿದ್ದಾರೆ.
ಟೆಲಿಕಾಂ ಇಲಾಖೆಯ ಮಾಜಿ ಸಂವಹನ ನಿಯಂತ್ರಕರಾಗಿದ್ದ ಜೋಶಿ ಅವರು ಆಗಸ್ಟ್ 26ರಂದು ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಉಲ್ಲೇಖಿಸಿ, ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನೇ ಪ್ರಶ್ನಿಸಿದ್ದರು.
ಈ ಸಂಬಂಧ ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ, ವಿಶೇಷ ದಳದ ಕೌಂಟರ್ ಇಂಟೆಲಿಜೆನ್ಸ್ (CI) ಘಟಕವು BNSನ ಸೆಕ್ಷನ್ 192ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಬುಧವಾರ ಬೆಳಿಗ್ಗೆ 10 ಗಂಟೆಗೆ ವಿಶೇಷ ದಳದ ಅಧಿಕಾರಿಗಳು ಜೋಶಿ ಅವರನ್ನು ಅವರ ಮನೆಯ ಸಮೀಪದಿಂದ ವಶಕ್ಕೆ ಪಡೆದಿದ್ದರು.
ಈ ಕುರಿತು ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ಮಾಹಿತಿ ನೀಡಿದ ಜೋಶಿ, ಪೊಲೀಸರು ಕೇಳಿದ ಪ್ರಶ್ನೆಗಳಲ್ಲಿ ಸುಮಾರು ಶೇ. 60ರಿಂದ 70ರಷ್ಟು ಪ್ರಶ್ನೆಗಳು ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ಕುರಿತು ಆಗಸ್ಟ್ 12ರಂದು ಮಾಡಿದ್ದ ತಮ್ಮ ಪೋಸ್ಟ್ಗೆ ಸಂಬಂಧಿಸಿದ್ದಾಗಿದ್ದವು ಎಂದು ಹೇಳಿದ್ದಾರೆ. ವಿಶೇಷವಾಗಿ, ಆ ಮಾಹಿತಿಯ ಮೂಲ ಯಾರೆಂಬುದನ್ನು ತಿಳಿದುಕೊಳ್ಳಲು ಪೊಲೀಸರು ಹೆಚ್ಚು ಆಸಕ್ತಿ ವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಆದರೆ, ಮಾಹಿತಿಯ ಮೂಲವನ್ನು ಪೊಲೀಸರಿಗೆ ಬಹಿರಂಗಪಡಿಸಲು ನಿರಾಕರಿಸಿರುವುದಾಗಿ ಹೇಳಿದ ಅವರು, ಹಾಗೆ ಮಾಡುವುದು ನೈತಿಕವಾಗಿ ತಪ್ಪು ಮತ್ತು ಬೌದ್ಧಿಕ ಅಪ್ರಾಮಾಣಿಕತೆಯಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಸಮನ್ಸ್ನಲ್ಲಿ ಉಲ್ಲೇಖಿಸಲಾಗಿದ್ದ ಆಗಸ್ಟ್ 26ರ ಪೋಸ್ಟ್ ಕುರಿತಾಗಿಯೂ ವಿಚಾರಣೆ ನಡೆಸಲಾಯಿತು ಎಂದು ಜೋಶಿ ತಿಳಿಸಿದ್ದಾರೆ.
“ಆ ಪೋಸ್ಟ್ನಲ್ಲಿ ನ್ಯೂರೆಂಬರ್ಗ್ ಶೈಲಿಯ ವಿಚಾರಣೆ ಎಂಬ ಉಲ್ಲೇಖವೂ ಇತ್ತು. ಈ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ, ಭಾರತದ ಸಂವಿಧಾನಕ್ಕೆ ದ್ರೋಹ ಬಗೆದ ಪ್ರತಿಯೊಬ್ಬರನ್ನೂ ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲಿಸಬೇಕು ಎಂಬುದೇ ನ್ಯೂರೆಂಬರ್ಗ್ ವಿಚಾರಣೆಯ ಸಂದರ್ಭದ ಅರ್ಥವಾಗಿತ್ತು ಎಂದು ಉತ್ತರಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
“ದೇಶದ ನಾಗರಿಕರ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮಗಳನ್ನು ಕೈಗೊಳ್ಳುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ನಾನು ಹೇಳಿದೆ,” ಎಂದು ಅವರು ಹೇಳಿದ್ದಾರೆ.
ವಿಶೇಷ ದಳದ ವಿಚಾರಣೆ ಕುರಿತ ಜೋಶಿಯವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಪಡೆಯಲು ದಿಲ್ಲಿ ಪೊಲೀಸ್ ವಕ್ತಾರ ರಾಜೀವ್ ರಂಜನ್ ಅವರನ್ನು ಸಂಪರ್ಕಿಸಿದಾಗ, ಅವರು ಸಂದೇಶ ಅಥವಾ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ತನ್ನ ವರದಿಯಲ್ಲಿ ತಿಳಿಸಿದೆ.
ಬುಧವಾರ ಬೆಳಿಗ್ಗೆ 10 ಗಂಟೆಗೆ ಅವರನ್ನು ವಶಕ್ಕೆ ಪಡೆದ ಬಳಿಕ, ಅವರ ಕುಟುಂಬದ ಸದಸ್ಯರು ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ CI ಘಟಕದ ಕಚೇರಿಯ ಮುಂದೆ ಜಮಾಯಿಸಿದ್ದರು. ಸುಮಾರು ಸಂಜೆ 7 ಗಂಟೆಗೆ ಅವರನ್ನು ಬಿಡುಗಡೆ ಮಾಡಲಾಗಿದ್ದು, ಪೊಲೀಸರು ಅವರನ್ನೇ ಮನೆಗೆ ತಲುಪಿಸಿದ್ದಾರೆ.






