ಮಳೆ ಅಬ್ಬರಕ್ಕೆ ಹಿಮಾಚಲ, ಉತ್ತರಾಖಂಡದಲ್ಲಿ 66 ಮಂದಿ ಮೃತ್ಯು; ಹಲವು ಮನೆಗಳು ಕುಸಿತ

Photo: PTI
ಶಿಮ್ಲಾ: ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ನಿರಂತರ ಮಳೆ ಹಾಗೂ ಭೂಕುಸಿತದಿಂದ 66 ಜನರು ಸಾವನ್ನಪ್ಪಿದ್ದಾರೆ, ಗಾಯಾಳುಗಳನ್ನು ರಕ್ಷಿಸಲಾಗುತ್ತಿದೆ. ಹಲವಾರು ಸ್ಥಳಗಳಲ್ಲಿ ಮನೆ ಕುಸಿದು ಅವಶೇಷಗಳಿಂದ ಮೃತ ದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರೆದಿದೆ.
ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ, ಆಗಸ್ಟ್ 13 ರಂದು ಭಾರೀ ಮಳೆ ಆರಂಭವಾದಾಗಿನಿಂದ 60 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಹಾಗೂ ಮುಂದಿನ ನಾಲ್ಕು ದಿನಗಳಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.
ಹಿಮಾಚಲದಲ್ಲಿ 3 ಮೃತದೇಹಗಳು ಪತ್ತೆ ಮೃತಪಟ್ಟವರ ಸಂಖ್ಯೆ 60ಕ್ಕೇರಿಕೆ
ಮಂಗಳವಾರ, ರಕ್ಷಣಾ ಕಾರ್ಯಕರ್ತರು ಭೂಕುಸಿತದಿಂದಾಗಿ ಮೂರು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದರು. ಶಿಮ್ಲಾದಲ್ಲಿ ಕುಸಿದ ಶಿವ ದೇವಾಲಯದ ಅವಶೇಷಗಳಿಂದ ಒಬ್ಬರ ದೇಹವನ್ನು ಹೊರತೆಗೆಯಲಾಗಿದ್ದು, ನಗರದಲ್ಲಿ ಹೊಸದಾಗಿ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಶಿಮ್ಲಾದ ಕೃಷ್ಣನಗರ ಪ್ರದೇಶದಲ್ಲಿ ಭೂಕುಸಿತದ ನಂತರ ಆರು ತಾತ್ಕಾಲಿಕ ಮನೆಗಳು ಸೇರಿದಂತೆ ಕನಿಷ್ಠ ಎಂಟು ಮನೆಗಳು ಕುಸಿದಿವೆ ಅವಶೇಷಗಳ ಅಡಿಯಲ್ಲಿ ಹೂತುಹೋಗಿದೆ.







