ಇರಾನ್ ನಿಂದ ಅರ್ಮೇನಿಯಾ, ದುಬೈ ಮೂಲಕ 70 ವಿದ್ಯಾರ್ಥಿಗಳು ಇಂದು ಭಾರತಕ್ಕೆ ವಾಪಾಸು

PC: x.com/prabhasakshi
ಡೆಹ್ರಾಡೂನ್: ಇರಾನ್ ಸಂಘರ್ಷದಿಂದಾಗಿ ಯುದ್ಧಪೀಡಿತ ದೇಶದಲ್ಲಿ ಸಿಲುಕಿಕೊಂಡಿರುವ ಬಹುತೇಕ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳು ಇಂದು ಅರ್ಮೇನಿಯಾ, ದುಬೈ ಮಾರ್ಗವಾಗಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಈ ವಿದ್ಯಾರ್ಥಿಗಳನ್ನು ಹೊತ್ತ ವಿಮಾನ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಬಂದಿಳಿಯಲಿದೆ ಎಂದು ಜಮ್ಮು & ಕಾಶ್ಮೀರ ವಿದ್ಯಾರ್ಥಿ ಸಂಘಟನೆ ಹೇಳಿಕೆನೀಡಿದೆ.
ಯಾತ್ರಿಗಳ ಜತೆಗೆ ಭಾರತೀಯ ವಿದ್ಯಾರ್ಥಿಗಳು ಫ್ಲೈದುಬೈ ಏರ್ಲೈನ್ಸ್ ಮೂಲಕ ಅರ್ಮೇನಿಯಾದ ಎರೆವಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸಲಿದ್ದಾರೆ ಎಂದು ಜೆಕೆಎಸ್ಎ ರಾಷ್ಟ್ರೀಯ ಸಂಚಾಲಕ ನಾಸಿರ್ ಖ್ಯುಹಾಮಿ ಹೇಳಿದ್ದಾರೆ.
ಇವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳು ಇರಾನಿನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವವರಾಗಿದ್ದು, ಮೊದಲ ಹಂತದಲ್ಲಿ ವಿದ್ಯಾರ್ಥಿಗಳು ಸಂಜೆ 5 ಗಂಟೆಯ ವೇಳೆಗೆ ದುಬೈಗೆ ಆಗಮಿಸುವ ನಿರೀಕ್ಷೆ ಇದೆ. ಬಳಿಕ ದೆಹಲಿಗೆ ಮತ್ತೊಂದು ಫ್ಲೈದುಬೈ ವಿಮಾನದಲ್ಲಿ ಆಗಮಿಸುತ್ತಾರೆ ಎಂದು ವಿವರಿಸಿದ್ದಾರೆ.




