ರಾತ್ರೋರಾತ್ರಿ ಮುಚ್ಚಿದ ಪುಣೆ ಐಟಿ ಕಂಪನಿ : 700 ಉದ್ಯೋಗಿಗಳು ಬೀದಿಪಾಲು

Photo credit : ndtv
ಪುಣೆ : ಇಲ್ಲಿನ ಥಿಂಕ್ ಟೆಕ್ನಾಲಜಿ ಇಂಡಿಯಾ ಎಂಬ ಸಾಫ್ಟ್ ವೇರ್ ಕಂಪನಿ ಯಾವುದೇ ನೋಟಿಸ್ ನೀಡದೇ ರಾತ್ರೋರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳು, ಪದವೀಧರರು ಮತ್ತು ಇಂಟರ್ನ್ಗಳು ಸೇರಿದಂತೆ 700 ಸಿಬ್ಬಂದಿ ಬೀದಿಪಾಲಾಗಿದ್ದಾರೆ. ಕಂಪನಿ ವಿರುದ್ಧ ವೇತನ ಪಾವತಿಸದೇ ಇರುವುದು, ಚೆಕ್ ಬೌನ್ಸ್ ಮತ್ತು ಹಣಕಾಸು ದುರ್ಬಳಕೆ ಆರೋಪಗಳು ಕೇಳಿಬಂದಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ವಿಶ್ವಾಸದ್ರೋಹ ಮತ್ತು ವಂಚನೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ 25 ವರ್ಷದ ಇಂಟರ್ನಿಯೊಬ್ಬರು ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಸುಮಾರು 30 ಮಂದಿ ಇಂಟರ್ನ್ಗಳು ಇಂಥದ್ದೇ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಂಪನಿಯ ಸಿಇಓ ಜತೆಗೆ ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಕಳೆದ ಏಪ್ರಿಲ್ ನಲ್ಲಿ ದಿಢೀರನೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಸಿಬ್ಬಂದಿ ಕಚೇರಿಗೆ ಬರಲು, ಬಾಕಿ ವೇತನ ಪಡೆಯಲು ಸಾಧ್ಯವಾಗಿಲ್ಲ. ಜತೆಗೆ ಆಡಳಿತ ಮಂಡಳಿಯಿಂದ ಯಾವುದೇ ಮಾಹಿತಿ ಕೂಡಾ ಲಭ್ಯವಾಗುತ್ತಿಲ್ಲ ಎಂದು ಉದ್ಯೋಗಿಗಳು ದೂರಿದ್ದಾರೆ. ಕಚೇರಿಗೆ ಬೀಗ ಜಡಿಯಲಾಗಿದ್ದು, ಕಂಪನಿಯ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಕಳೆದ ವರ್ಷ ಆರಂಭವಾದ ಈ ಕಂಪನಿ, ಲ್ಯಾಪ್ ಟಾಪ್ ಹಾಗೂ ಇತರ ಅಗತ್ಯತೆಗಳಿಗಾಗಿ ಎಲ್ಲ ಸಿಬ್ಬಂದಿ ಹಾಗೂ ಇಂಟರ್ನ್ಗಳಿಂದ ತಲಾ 15 ಸಾವಿರ ರೂಪಾಯಿ ಭದ್ರತಾ ಠೇವಣಿಯನ್ನು ಕೂಡಾ ಸಂಗ್ರಹಿಸಿತ್ತು ಎನ್ನಲಾಗಿದೆ. ಆರಂಭದಲ್ಲಿ ವೇತನ ಹಾಗೂ ಶಿಷ್ಯವೇತನ ನೀಡಲಾಗುತ್ತಿತ್ತು. ಆದರೆ 2026ರಿಂದ ವೇತನ ಸ್ಥಗಿತಗೊಳಿಸಲಾಗಿದೆ. ಬಾಕಿ ವೇತನ ಇತ್ಯರ್ಥಪಡಿಸಲು ನೀಡಿದ್ದ ಚೆಕ್ಕುಗಳು ಬೌನ್ಸ್ ಆಗಿದ್ದು, ಕಂಪನಿಯ ಹಣಕಾಸು ಸ್ಥಿತಿ ಬಗ್ಗೆ ಆತಂಕ ಮೂಡಿದೆ ಎಂದು ಉದ್ಯೋಗಿಗಳು ಹೇಳಿದ್ದಾರೆ.
ಆಂತರಿಕ ಲೆಕ್ಕಪರಿಶೋಧನೆ ಮತ್ತು ಆರ್ಥಿಕ ವಿಳಂಬದಿಂದಾಗಿ ಸಮಸ್ಯೆಯಾಗಿದ್ದು, ಭರವಸೆ ನೀಡಿದ ವೇತನವನ್ನು ಶೀಘ್ರವೇ ನೀಡುವುದಾಗಿ ಕಂಪನಿಯ ಆಡಳಿತ ಮಂಡಳಿ ಹೇಳುತ್ತಿದೆ ಎಂದು ಮಾಜಿ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಆದರೆ, ಆ ವೇತನ ಇನ್ನೂ ಯಾವುದೇ ಉದ್ಯೋಗಿಗಳ ಕೈಸೇರಿಲ್ಲ. ಕಂಪನಿ ಭದ್ರತಾ ಠೇವಣಿ ಸಂಗ್ರಹಿಸಿದಾಗ ನೀಡಿದ ಭರವಸೆಯಂತೆ ಲ್ಯಾಪ್ಟಾಪ್ ನೀಡಿಲ್ಲ ಅಥವಾ ಇದುವರೆಗೆ ಶಿಷ್ಯವೇತನವನ್ನೂ ನೀಡಿಲ್ಲ ಎಂದು ಇಂಟರ್ನ್ಗಳು ಆರೋಪಿಸಿದ್ದಾರೆ.






