ಪಿಎಫ್ ಖಾತೆಯಿಂದ ಶೇ.75ರಷ್ಟು ಹಣವನ್ನು ತಕ್ಷಣ ಹಿಂಪಡೆಯಬಹುದು : ಸರಕಾರ ಸ್ಪಷ್ಟನೆ

Photo Credi : epfindia.gov.in
ಹೊಸದಿಲ್ಲಿ,ಅ.15: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್ಒ) ಸದಸ್ಯರು ತಮ್ಮ ಖಾತೆಯಲ್ಲಿನ ಹಣವನ್ನು ಹಿಂಪಡೆಯುವದಕ್ಕೆ ಸಂಬಂಧಿಸಿದಂತೆ ಸೋಮವಾರ ಹೊರಡಿಸಿದ ಮಾರ್ಗಸೂಚಿಗಳು ಸೃಷ್ಟಿಸಿರುವ ಗೊಂದಲ ಮತ್ತು ತಪ್ಪು ಮಾಹಿತಿಯನ್ನು ನಿವಾರಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬುಧವಾರ ಸ್ಪಷ್ಟೀಕರಣವನ್ನು ನೀಡಿದೆ. ಸದಸ್ಯರು ಉದ್ಯೋಗವನ್ನು ಕಳೆದುಕೊಂಡ 12 ತಿಂಗಳುಗಳ ಬಳಿಕವಷ್ಟೇ ತಮ್ಮ ಭವಿಷ್ಯ ನಿಧಿ ಖಾತೆಗಳಿಂದ ಪೂರ್ಣ ಹಣವನ್ನು ಹಿಂಪಡೆಯಯಲು ಸಾಧ್ಯ ಎಂಬ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಸದಸ್ಯರು ಉದ್ಯೋಗವನ್ನು ತೊರೆದ ತಕ್ಷಣ ತಮ್ಮ ಖಾತೆಯಿಂದ ಶೇ.75ರಷ್ಟು ಮೊತ್ತವನ್ನು ಹಿಂಪಡೆಯಬಹುದು ಎಂದು ಅದು ಸ್ಪಷ್ಟಪಡಿಸಿದೆ.
ಸದಸ್ಯರು ಒಂದು ವರ್ಷ ಕಾಲ ನಿರುದ್ಯೋಗಿಯಾಗಿ ಉಳಿದರೆ ಅವರು ತಮ್ಮ ಖಾತೆಯಲ್ಲಿನ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
ನಿಯಮಗಳಲ್ಲಿ ಬದಲಾವಣೆಯು ಸದಸ್ಯರ ದೀರ್ಘಾವಧಿಯ ಹಿತಾಸಕ್ತಿಗಳ ರಕ್ಷಣೆಯ ಉದ್ದೇಶವನ್ನು ಹೊಂದಿದೆ ಎಂದು ಸಚಿವಾಲಯವು ವಾದಿಸಿದೆ. ಆಗಾಗ್ಗೆ, ಭಾಗಶಃ ಹಣವನ್ನು ಹಿಂಪಡೆಯುವ ಹಿಂದಿನ ವ್ಯವಸ್ಥೆಯು ಉದ್ಯೋಗಿಯ ನಿರಂತರ ಸೇವಾ ದಾಖಲೆಗೆ ಭಂಗವನ್ನುಂಟು ಮಾಡುತ್ತಿತ್ತು ಮತ್ತು ಇದು ಹಲವಾರು ಪಿಂಚಣಿ ಹಕ್ಕುಗಳನ್ನು ತಿರಸ್ಕರಿಸಲು ಪ್ರಮುಖ ಕಾರಣವಾಗಿತ್ತು. ಈ ವ್ಯವಸ್ಥೆಯಿಂದಾಗಿ ಅಂತಿಮ ಇತ್ಯರ್ಥದ ಬಳಿಕ ಸಣ್ಣ ಮೊತ್ತ ಭವಿಷ್ಯ ನಿಧಿ ಸದಸ್ಯರ ಕೈಸೇರುತ್ತಿತ್ತು ಎಂದು ಸಚಿವಾಲಯವು ವಿವರಿಸಿದೆ.
ಈ ನೂತನ ನಿಬಂಧನೆಗಳು ಸೇವೆಯ ನಿರಂತರತೆ, ಅಂತಿಮ ಪಿಎಫ್ ಇತ್ಯರ್ಥದ ಬಳಿಕ ದೊಡ್ಡ ಮೊತ್ತವನ್ನು ಖಚಿತಪಡಿಸುತ್ತವೆ ಮತ್ತು ಕುಟುಂಬವು ಆರ್ಥಿಕ ತೊಂದರೆಯನ್ನು ಎದುರಿಸಬೇಕಿಲ್ಲ ಎಂದು ಅದು ತಿಳಿಸಿದೆ.
ಉದ್ಯೋಗಿಗಳ ಶೇ.25ರಷ್ಟು ಭವಿಷ್ಯ ನಿಧಿ ಹಣವು ಖಾತೆಯಲ್ಲಿಯೇ ಸಿಕ್ಕಿಕೊಂಡಿದೆ ಎಂಬ ಮಿಥ್ಯೆಯನ್ನು ತಿರಸ್ಕರಿಸಿರುವ ಅದು, ಹಳೆಯ ವ್ಯವಸ್ಥೆಯು ಸಂಕೀರ್ಣತೆಗಳಿಂದ ತುಂಬಿತ್ತು, ಅದು 13 ವಿಭಿನ್ನ ವರ್ಗಗಳನ್ನು ಒಳಗೊಂಡಿತ್ತು ಮತ್ತು ಹಲವಾರು ಷರತ್ತುಗಳಿದ್ದವು, ಇದು ಸದಸ್ಯರ ಹಣ ಖಾತೆಗಳಲ್ಲಿಯೇ ಸಿಲುಕಿಕೊಳ್ಳಲು ಕಾರಣವಾಗಿತ್ತು ಎಂದು ಹೇಳಿದೆ.
ಇಡೀ ಪ್ರಕ್ರಿಯೆಯನ್ನು ಈಗ ಏಕರೂಪದ ನಿಬಂಧನೆಯಾಗಿ ಸರಳೀಕರಿಸಲಾಗಿದೆ. ಇದು ಈಗ ಹೆಚ್ಚಿನ ಪ್ರಕರಣಗಳಲ್ಲಿ ದಾಖಲೆಗಳ ತೊಡಕಿಲ್ಲದೆ ಹಣವನ್ನು ಸುಲಭವಾಗಿ ಹಿಂದೆಗೆದುಕೊಳ್ಳಲು ಅವಕಾಶ ನೀಡುತ್ತದೆ ಎಂದಿದೆ.
ಮದುವೆ ಅಥವಾ ಮನೆ ಖರೀದಿಯಂತಹ ನಿರ್ದಿಷ್ಟ ಅಗತ್ಯಗಳಿಗಾಗಿ ಹಣ ಹಿಂಪಡೆಯುವಿಕೆಗಾಗಿ ಕಾಯುವಿಕೆ ಅವಧಿಯನು ತಗ್ಗಿಸಿರುವುದು ಪ್ರಮುಖ ಸುಧಾರಣೆಯಾಗಿದೆ. ಈ ಹಿಂದೆ ಸದಸ್ಯರು ಇದಕ್ಕಾಗಿ ಐದರಿಂದ ಏಳು ವರ್ಷಗಳ ಕಾಲ ಕಾಯಬೇಕಿತ್ತು. ನೂತನ ನಿಯಮಗಳು ಕೇವಲ ಒಂದು ವರ್ಷದ ಸೇವೆಯ ಬಳಿಕ ಈ ಉದ್ದೇಶಗಳಿಗಾಗಿ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತವೆ.
ಸರಕಾರವು ಮೊದಲು ಏನು ಹೇಳಿತ್ತು?
ಭವಿಷ್ಯ ನಿಧಿ(ಪಿಎಫ್)ಯ ಅಂತಿಮ ಇತ್ಯರ್ಥದ ಅವಧಿಯನ್ನು ಎರಡು ತಿಂಗಳಿನಿಂದ 12 ತಿಂಗಳುಗಳಿಗೆ ಹೆಚ್ಚಿಸಲಾಗಿದೆ. ಭವಿಷ್ಯ ನಿಧಿ ಸಂಸ್ಥೆಯ ಸದಸ್ಯರು ಉದ್ಯೋಗವನ್ನು ಕಳೆದುಕೊಂಡ 12 ತಿಂಗಳುಗಳ ಬಳಿಕವಷ್ಟೇ ತಮ್ಮ ಭವಿಷ್ಯ ನಿಧಿ ಖಾತೆಗಳಿಂದ ಪೂರ್ಣ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸೋಮವಾರ ಪ್ರಕಟಿಸಿತ್ತು.
ಇದೇ ರೀತಿ ಸದಸ್ಯರು 36 ತಿಂಗಳುಗಳ ನಂತರವಷ್ಟೇ ಪಿಂಚಣಿ ಖಾತೆಗಳಿಂದ ಹಣವನ್ನು ಹಿಂಪಡೆಯಬಹುದು. ಪ್ರಸ್ತುತ ಉದ್ಯೋಗವನ್ನು ಕಳೆದುಕೊಂಡ ಎರಡು ತಿಂಗಳುಗಳ ಬಳಿಕ ಅಂತಿಮ ಪಿಂಚಣಿ ಹಿಂಪಡೆಯಲು ಅವಕಾಶವಿದೆ ಎಂದು ಅದು ತಿಳಿಸಿತ್ತು.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ನೇತೃತ್ವದ ಇಪಿಎಫ್ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಯೋಜನೆಗೆ ತಿದ್ದುಪಡಿಯನ್ನು ತರಲು ಸೋಮವಾರ ನಿರ್ಧರಿಸಿತ್ತು.
ಸದಸ್ಯರು ತಮ್ಮ ಪಿಎಫ್ ಖಾತೆಗಳಲ್ಲಿ ‘ಎಲ್ಲ ಸಮಯದಲ್ಲಿಯೂ’ ಶೇ.25ರಷ್ಟು ಮೊತ್ತವನ್ನು ಕನಿಷ್ಠ ಬ್ಯಾಲೆನ್ಸ್ ಆಗಿ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯವು ಸಭೆಯ ಬಳಿಕ ಹೇಳಿಕೆಯಲ್ಲಿ ತಿಳಿಸಿತ್ತು.







