ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್ : 8ನೇ ವೇತನ ಆಯೋಗ ಉಲ್ಲೇಖಿತ ನಿಬಂಧನೆಗಳಿಗೆ ಕೇಂದ್ರ ಸಂಪುಟದ ಅನುಮೋದನೆ

ಹೊಸದಿಲ್ಲಿ,ಅ.28: ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಎಂಟನೇ ಕೇಂದ್ರ ವೇತನ ಆಯೋಗದ ಉಲ್ಲೇಖಿತ ನಿಬಂಧನೆಗಳಿಗೆ ಮಂಗಳವಾರ ಅನುಮೋದನೆಯನ್ನು ನೀಡಿದೆ. ಇದು ಸುಮಾರು 50 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರಿಗೆ ವೇತನ, ಪಿಂಚಣಿ ಮತ್ತು ಸೇವಾ ಷರತ್ತುಗಳ ಪುನರ್‌ಪರಿಶೀಲನೆಗೆ ಮಾರ್ಗವನ್ನು ಸುಗಮಗೊಳಿಸಿದೆ. ಈ ನಿರ್ಧಾರವು ಸಾಮಾನ್ಯವಾಗಿ ಕೇಂದ್ರ ವೇತನ ಪರಿಷ್ಕರಣೆಗಳನ್ನು ಮಾರ್ಪಾಡುಗಳೊಂದಿಗೆ ಅಳವಡಿಸಿಕೊಳ್ಳುವ ರಾಜ್ಯ ಸರಕಾರಗಳು ಸೇರಿದಂತೆ ವ್ಯಾಪಕ ಆರ್ಥಿಕ ಪರಿಣಾಮಗಳನ್ನು ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.
8ನೇ ವೇತನ ಆಯೋಗದ ಅಧ್ಯಕ್ಷರಾಗಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ರಂಜನಾ ಪ್ರಕಾಶ ದೇಸಾಯಿ, ಅರೆಕಾಲಿಕ ಸದಸ್ಯರಾಗಿ ಐಐಎಂ-ಬೆಂಗಳೂರಿನ ಪ್ರೊ.ಪುಲಕ್ ಘೋಷ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ ಜೈನ್ ಅವರು ನೇಮಕಗೊಂಡಿದ್ದಾರೆ.
18 ತಿಂಗಳುಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಲಾಗಿದೆ. ಆದಾಗ್ಯೂ ಅದು ನಿರ್ದಿಷ್ಟ ಶಿಫಾರಸುಗಳು ಅಂತಿಮಗೊಂಡಾಗ ಮಧ್ಯಂತರ ವರದಿಗಳನ್ನು ಸಲ್ಲಿಸಬಹುದು.
ಸಭೆಯ ಬಳಿಕ ಸಂಪುಟದ ಅನುಮೋದನೆಯನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಜಂಟಿ ಸಮಾಲೋಚನಾ ವ್ಯವಸ್ಥೆಯ ಮೂಲಕ ಕೇಂದ್ರ ಸಚಿವಾಲಯಗಳು, ರಾಜ್ಯ ಸರಕಾರಗಳು ಮತ್ತು ನೌಕರರ ಪ್ರತಿನಿಧಿಗಳೊಂದಿಗೆ ಸಮಾಲೋಚನೆಗಳ ಬಳಿಕ ಉಲ್ಲೇಖಿತ ನಿಬಂಧನೆಗಳನ್ನು ಅಂತಿಮಗೊಳಿಸಲಾಗಿತ್ತು ಎಂದು ತಿಳಿಸಿದರು.
ನೂತನ ವೇತನ ಶ್ರೇಣಿಗಳು ಎಂದಿನಿಂದ ಜಾರಿಗೊಳ್ಳಲಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವೈಷ್ಣವ್, ಮಧ್ಯಂತರ ವರದಿ ಸಲ್ಲಿಕೆಯಾದ ಬಳಿಕ ನಿರ್ದಿಷ್ಟ ದಿನಾಂಕವನ್ನು ನಿರ್ಧರಿಸಲಾಗುವುದು. ಬಹುತೇಕ 1,ಜನವರಿ 2026ರಿಂದ ಜಾರಿಗೊಳ್ಳಬಹುದು ಎಂದು ತಿಳಿಸಿದರು.
ನ.6 ಮತ್ತು 11ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮುನ್ನ ಸಂಪುಟವು ತೆಗೆದುಕೊಂಡಿರುವ ಈ ನಿರ್ಧಾರವು ದೇಶಾದ್ಯಂತ ಸರಕಾರಿ ನೌಕರರು ಮತ್ತು ಪಿಂಚಣಿದಾರರ ಮೇಲೆ ರಾಜಕೀಯ ಪ್ರಭಾವವನ್ನು ಬೀರುವ ನಿರೀಕ್ಷೆಯಿದೆ.
ಸರಕಾರವು ಸುಮಾರು ಒಂಭತ್ತು ತಿಂಗಳುಗಳ ಹಿಂದೆ ನೂತನ ವೇತನ ಆಯೋಗದ ರಚನೆಗೆ ತಾತ್ವಿಕ ಅನುಮೋದನೆಯನ್ನು ನೀಡಿತ್ತು. ಸಾಂಪ್ರದಾಯಿಕವಾಗಿ ಪ್ರತಿ ವೇತನ ಆಯೋಗದ ಶಿಫಾರಸುಗಳನ್ನು ಸರಿಸುಮಾರು ಪ್ರತಿ ದಶಕದಲ್ಲಿ ಜಾರಿಗೊಳಿಸಲಾಗುತ್ತದೆ. ಫೆಬ್ರವರಿ 2014ರಲ್ಲಿ ರಚಿಸಲಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳು 1,ಜನವರಿ 2026ರಿಂದ ಜಾರಿಗೊಂಡಿದ್ದವು.







