‘ದೇವರ ಸ್ವಂತ ನಾಡು’ ಕೇರಳದಲ್ಲಿ ಭಾರೀ ದುರಂತ | ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತಗಳಿಗೆ ಕನಿಷ್ಠ 150 ಜೀವಗಳು ಬಲಿ
►ಮುಂಡಕ್ಕೈ ಪಟ್ಟಣ ಸಂಪೂರ್ಣ ನಾಮಾವಶೇಷ ►ಕಲ್ಲುಮಣ್ಣುಗಳಡಿ ಸಿಲಕಿರುವ ನೂರಾರು ಜನರು ►ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ►ರಾಜ್ಯದಲ್ಲಿ ಎರಡು ದಿನ ಶೋಕಾಚರಣೆ

PC : thehindu.com
ವಯನಾಡ್ : ಭಾರೀ ಮಳೆಯಾಗುತ್ತಿರುವ ಕೇರಳದ ವಯನಾಡ್ ಜಿಲ್ಲೆಯ ವೈತಿರಿ ತಾಲೂಕಿನಲ್ಲಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದ ಭೀಕರ ಭೂಕುಸಿತಗಳು ಎಳೆಯ ಮಕ್ಕಳು ಸೇರಿದಂತೆ ಕನಿಷ್ಠ 150 ಜೀವಗಳನ್ನು ಬಲಿ ತೆಗೆದುಕೊಂಡಿವೆ. ಹಲವಾರು ಕುಟುಂಬಗಳು ನಾಪತ್ತೆಯಾಗಿದ್ದರೆ ಕಲ್ಲುಮಣ್ಣಿನಡಿ ಸಿಕ್ಕಿ ಹಾಕಿಕೊಂಡಿರುವ ನೂರಾರು ಜನರಿಗಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. 130ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಜನರು ಸವಿನಿದ್ರೆಯಲ್ಲಿದ್ದಾಗ ಸಂಭವಿಸಿದ ಭೂಕುಸಿತಗಳಲ್ಲಿ ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ. ಚಿತ್ರ ಸದೃಶ ರಮಣೀಯ ಸ್ಥಳವಾಗಿದ್ದ ಪ್ರದೇಶದಲ್ಲಿ ಈಗ ಎಲ್ಲೆಲ್ಲೂ ವಿನಾಶವೇ ತಾಂಡವವಾಡುತ್ತಿದೆ. ಹಲವಾರು ಮನೆಗಳು ಧ್ವಂಸಗೊಂಡಿವೆ. ಜಲಮೂಲಗಳು ತುಂಬಿ ಹರಿಯುತ್ತಿವೆ,ಮರಗಳು ಬುಡಸಹಿತ ಉರುಳಿ ಬಿದ್ದಿವೆ. ರಕ್ಷಣಾ ಕಾರ್ಯಾಚರಣೆಗಳಿಗೆ ತೀವ್ರ ಅಡ್ಡಿಯಂಟಾಗಿದೆ.
ಮೆಪ್ಪಾಡಿಯಲ್ಲಿ ಸಂಭವಿಸಿದ ಭೂಕುಸಿತ ಇಡೀ ಗ್ರಾಮವನ್ನೇ ಆಪೋಷನ ತೆಗೆದುಕೊಂಡಿದೆ. ಮುಂಡಕ್ಕೈ, ಚೂರ್ಲಮಾಲ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ವರದಿಗಳಂತೆ ಮುಂಡಕ್ಕೈ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.
ಉಕ್ಕಿ ಹರಿಯುತ್ತಿರುವ ಜಲಮೂಲಗಳು ಮಾರ್ಗವನ್ನು ಬದಲಿಸಿ ಜನವಸತಿ ಪ್ರದೇಶದ ಮೂಲಕ ಹರಿದಿದ್ದು ಹೆಚ್ಚಿನ ವಿನಾಶವನ್ನುಂಟು ಮಾಡಿದೆ. ಗುಡ್ಡಗಳಿಂದ ಕೆಳಗುರುಳಿದ ಬೃಹತ್ ಬಂಡೆಗಳು ರಕ್ಷಣಾ ಕಾರ್ಯಕರ್ತರಿಗೆ ತೀವ್ರ ತಡೆಯನ್ನುಂಟು ಮಾಡಿವೆ.
ಮಾಧ್ಯಮ ವರದಿಗಳಂತೆ ಹಲವಾರು ಕಿ.ಮೀ.ಗಳಷ್ಟು ದೂರದ ಮಲಪ್ಪುರಮ್ ನಲ್ಲಿ ಚಾಲಿಯಾರ್ ನದಿಯಲ್ಲಿ ತೇಲುತ್ತಿದ್ದ 17 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಮೃತರ ಶವಗಳನ್ನು ಗುರುತು ಪತ್ತೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಈವರೆಗೆ ಕನಿಷ್ಠ 150 ಸಾವುಗಳು ದೃಢಪಟ್ಟಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕವಿದೆ ಎಂದು ಸ್ಪೆಷಲ್ ಬ್ರ್ಯಾಂಚ್ ಡಿವೈಎಸ್ಪಿ ಪಿ.ಎಲ್.ಶೈಜು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
34 ಶವಗಳನ್ನು ಗುರುತಿಸಲಾಗಿದ್ದು, ಈ ಪೈಕಿ 18 ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅಪರಿಚಿತ ಶವಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಜಿಲ್ಲೆಯಲ್ಲಿ 45 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು,3069 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ 118 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 5531 ಜನರು ಆಶ್ರಯ ಪಡೆದಿದ್ದಾರೆ ಎಂದರು.
ಕೆಸರು ಮಿಶ್ರಿತ ನೀರಿನ ಪ್ರವಾಹದ ನಡುವೆ ತಮ್ಮ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಮತ್ತು ರಸ್ತೆಗಳಲ್ಲಿ ನೆರೆ ನೀರು ತುಂಬಿರುವುದರಿಂದ ಸ್ಥಳದಿಂದ ತೆರಳಲು ಸಾಧ್ಯವಾಗದ ಹಲವಾರು ಜನರು ಅಳುತ್ತಿರುವ ಮತ್ತು ರಕ್ಷಣೆಗಾಗಿ ಅಂಗಲಾಚುತ್ತಿರುವ ಹೃದಯ ಕಲಕುವ ದೂರವಾಣಿ ಸಂಭಾಷಣೆಗಳನ್ನು ಸ್ಥಳೀಯ ಟಿವಿ ವಾಹಿನಿಗಳು ಪ್ರಸಾರ ಮಾಡಿವೆ.
ನಿರಂತರ ಮಳೆ ಮತ್ತು ತೀವ್ರ ಪ್ರತಿಕೂಲ ಹವಾಮಾನದಿಂದಾಗಿ ಸವಾಲಾಗಿರುವ ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗಲು ಎನ್ಡಿಆರ್ಎಫ್ ತಂಡಗಳು ಮತ್ತು ಸೇನಾ ತುಕಡಿಗಳು ಧಾವಿಸಿವೆ, ಜೊತೆಗೆ ಹೆಲಿಕಾಪ್ಟರ್ಗಳೂ ಆಗಮಿಸಿವೆ ಎಂದು ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್. ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ವರದಿಗಳ ಪ್ರಕಾರ ಚೂರ್ಲಮಾಲ ಪ್ರದೇಶವನ್ನು ಸಂಪರ್ಕಿಸುವ ಸೇತುವೆಗೆ ಹಾನಿಯಾಗಿದ್ದು,ಸಂಪೂರ್ಣವಾಗಿ ನಾಮಾವಶೇಷಗೊಂಡಿರುವ ಮುಂಡಕ್ಕೈ ತಲುಪಲು ರಕ್ಷಣಾ ತಂಡಗಳು ಹೆಣಗಾಡುತ್ತಿವೆ.
ಎನ್ಡಿಆರ್ಎಫ್ ಜೊತೆಗೆ ಪೋಲಿಸ್ ಮತ್ತು ಅಗ್ನಿಶಾಮಕ ಪಡೆಯ ವಿಪತ್ತು ಪ್ರತಿಕ್ರಿಯಾ ತಂಡಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಸ್ವಯಂಸೇವಕರು ಮತ್ತು ಸ್ಥಳೀಯ ನಿವಾಸಿಗಳೂ ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ.
ಕರಮಂತೋಡು ನದಿಯ ಬಾಣಾಸುರ ಸಾಗರ ಅಣೆಕಟ್ಟಿನ ದ್ವಾರವನ್ನು ತೆರೆಯಲಾಗಿದ್ದು, ಕೆಲಭಾಗದಲ್ಲಿಯ ಮತ್ತು ತಗ್ಗುಪ್ರದೇಶಗಳ ಜನರಿಗೆ ಸಂಭಾವ್ಯ ನೆರೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕೇರಳ ಸರಕಾರದ ಕೋರಿಕೆಯ ಮೇರೆಗೆ 43 ಸೇನಾ ಸಿಬ್ಬಂದಿಗಳ ತಂಡವನ್ನು ರವಾನಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದರು.
ಚೂರ್ಲಮಾಲದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದರೆ, ಥೊಂಡರನಾಡ್ ಗ್ರಾಮದಲ್ಲಿ ನೇಪಾಳಿ ಕುಟುಂಬಕ್ಕೆ ಸೇರಿದ ಒಂದು ವರ್ಷದ ಮಗು ಮೃತಪಟ್ಟಿದೆ. ಪೊತ್ತುಕಲ್ ಗ್ರಾಮದ ಸಮೀಪ ನದಿಯ ದಂಡೆಗಳಲ್ಲಿ ಐದರ ಹರೆಯದ ಮಗು ಸೇರಿದಂತೆ ಮೂವರ ಶವಗಳು ಪತ್ತೆಯಾಗಿವೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸರಕಾರದ ಎಲ್ಲ ಇಲಾಖೆಗಳು ಕೈಜೋಡಿಸಿವೆ. ನೂರಾರು ಜನರು ಸಿಕ್ಕಿಹಾಕಿಕೊಂಡಿರುವ ಭೀತಿಯಿದ್ದು, ಸಮನ್ವಯದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಐವರು ಸಚಿವರು ಸ್ಥಳದಲ್ಲಿದ್ದು ಮೇಲ್ವಿಚಾರಣೆ ವಹಿಸಿದ್ದಾರೆ. ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಕೇರಳ ಸಶಸ್ತ್ರ ಪೋಲಿಸ್ ಪಡೆಯ ಎರಡು ಬೆಟಾಲಿಯನ್ಗಳು ಮತ್ತು ಮಲಬಾರ್ ಸ್ಪೆಷಲ್ ಪೋಲಿಸ್ ಪಡೆಯನ್ನು ಸ್ಥಳಕ್ಕೆ ರವಾನಿಸಲಾಗಿದೆ. ಆರೋಗ್ಯ ಇಲಾಖೆಯ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
►ಎರಡು ದಿನ ಶೋಕಾಚರಣೆ
ಭೀಕರ ದುರಂತದ ಹಿನ್ನಲೆಯಲ್ಲಿ ಕೇರಳ ಸರಕಾರವು ಮಂಗಳವಾರ ಮತ್ತು ಬುಧವಾರ ಅಧಿಕೃತ ಶೋಕಾಚರಣೆಯನ್ನು ಪ್ರಕಟಿಸಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಮಾರಂಭಗಳು ಮತ್ತು ಕಾರ್ಯಕ್ರಮಗಳು ನಡೆಯುವುದಿಲ್ಲ.
► ಕಡೆಗಣಿಸಲಾಗಿದ್ದ ಮಾಧವ ಗಾಡ್ಗೀಳ್ ಸಮಿತಿ ವರದಿಯಲ್ಲಿನ ಎಚ್ಚರಿಕೆಗಳು ಮತ್ತೆ ಮುನ್ನೆಲೆಗೆ
ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತಗಳು ಚಿತ್ರಸದೃಶ ರಮಣೀಯ ಪ್ರದೇಶವನ್ನು ಆಘಾತ ಮತ್ತು ಸಂಕಷ್ಟಕ್ಕೆ ತುತ್ತಾಗಿಸಿದೆ. ಇದರೊಂದಿಗೆ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ)ಗಳಲ್ಲಿ ವಿವೇಚನಾರಹಿತ ಕಲ್ಲು ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ನಡೆಸುವುದರ ವಿರುದ್ಧ ನಿರ್ದಿಷ್ಟವಾಗಿ ಎಚ್ಚರಿಕೆಗಳನ್ನು ನೀಡಿದ್ದ 13 ವರ್ಷಗಳಷ್ಟು ಹಿಂದಿನ ವರದಿಯೊಂದು ಮತ್ತೆ ಮುನ್ನೆಲೆಗೆ ಬಂದಿದೆ.
ಮಾಧವ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು 2011ರಲ್ಲಿ ಕೇಂದ್ರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಮೆಪ್ಪಾಡಿಯಲ್ಲಿ ಪರಿಸರ ವಿರೋಧಿ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿತ್ತು. ಇದೇ ಮೆಪ್ಪಾಡಿಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಭೂಕುಸಿತವು ಇಡೀ ಗ್ರಾಮವನ್ನೇ ಆಪೋಷನ ಪಡೆದಿದೆ.
ವೈತಿರಿ ತಾಲೂಕಿನಲ್ಲಿರುವ ಮೆಪ್ಪಾಡಿ ಗಾಡ್ಗೀಳ್ ಸಮಿತಿಯು ಗುರುತಿಸಿದ್ದ ಕೇರಳದ 18 ಪರಿಸರ ಸೂಕ್ಷ್ಮಸ್ಥಳ (ಇಎಸ್ಎಲ್)ಗಳಲ್ಲಿ ಒಂದಾಗಿದೆ. ತಾಲೂಕಿನ ಮುಂಡಕ್ಕೈ, ಚೂರ್ಲಮಾಲಾ, ಅಟ್ಟಮಾಲಾ ಮತ್ತು ನೂಲ್ಪುಳಾ ಗ್ರಾಮಗಳಲ್ಲಿಯೂ ಭೂಕುಸಿತದಿಂದ ಜೀವಹಾನಿ,ಆಸ್ತಿನಷ್ಟಗಳು ಸಂಭವಿಸಿವೆ.
ದುರಂತವೆಂದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರಲು ತಲೆ ಕೆಡಿಸಿಕೊಂಡಿರಲಿಲ್ಲ,ಬದಲಿಗೆ ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು.
ಗಾಡ್ಗೀಳ್ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟಗಳಲ್ಲಿಯ ಪರಿಸರ ಸೂಕ್ಷ ಪ್ರದೇಶಗಳು ಮತ್ತು ವಲಯಗಳ ವರ್ಗೀಕರಣವನ್ನು ಪ್ರಸ್ತಾವಿಸಿತ್ತು.
ಪರಿಸರ ಸೂಕ್ಷ್ಮ ವಲಯ (ಇಎಸ್ಝಡ್)-1 ಮತ್ತು 2ರಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ವರದಿಯಲ್ಲಿ ಸ್ವಷ್ಟವಾಗಿ ಸೂಚಿಸಲಾಗಿತ್ತು.
‘ಇಎಸ್ಝಡ್-1ರಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು ಎಂದು ನಾವು ಸೂಚಿಸಿದ್ದೆವು. ಅಲ್ಲದೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾದ ಪ್ರದೇಶಗಳಲ್ಲಿ ಕಲ್ಲಿನ ಕೋರೆಗಳು ಜನವಸತಿಯಿಂದ ಕನಿಷ್ಠ 100 ಮೀ.ದೂರವಿರಬೇಕು ಎಂದೂ ನಾವು ಸೂಚಿಸಿದ್ದೆವು. ಆದರೆ ನಂತರ ಸರಕಾರವು ಈ ಅಂತರವನ್ನು ಕೇವಲ 50 ಮೀ.ಗಳಿಗೆ ತಗ್ಗಿಸಿತ್ತು’ ಎಂದು ಗಾಡ್ಗೀಳ್ ಸಮಿತಿಯ ಸದಸ್ಯ ಹಾಗೂ ಪರಿಸರವಾದಿ ವಿ.ಎಸ್.ವಿಜಯನ್ ಬೆಟ್ಟು ಮಾಡಿದರು.
ಕೇಂದ್ರ ಸರಕಾರವು ನಂತರ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿತ್ತು ಮತ್ತು ಇನ್ನೊಂದು ವರದಿಯನ್ನು ನೀಡಲು ಕಸ್ತೂರಿ ರಂಗನ್ ನೇತೃತ್ವದ ಹೊಸ ಸಮಿತಿಯನ್ನು ರಚಿಸಿತ್ತು. ಗಾಡ್ಗೀಳ್ ಸಮಿತಿಯು ಇಡೀ ಪಶ್ಚಿಮ ಘಟ್ಟಗಳನ್ನು ಇಎಸ್ಎಗಳು ಎಂದು ಅಧಿಸೂಚಿಸುವಂತೆ ಶಿಫಾರಸು ಮಾಡಿದ್ದರೆ ಕಸ್ತೂರಿ ರಂಗನ್ ಸಮಿತಿಯು ಇಎಸ್ಎಗಳ ವ್ಯಾಪ್ತಿಯನ್ನು ಪಶ್ಚಿಮ ಘಟ್ಟಗಳ ಶೇ.37ರಷ್ಟು ಪ್ರದೇಶಕ್ಕೆ ತಗ್ಗಿಸಿತ್ತು.
ಊಮ್ಮನ್ ಚಾಂಡಿ ನೇತೃತ್ವದ ಆಗಿನ ರಾಜ್ಯ ಸರಕಾರವೂ ಗಾಡ್ಗೀಳ್ ಸಮಿತಿಯ ವರದಿಯನ್ನು ವಿರೋಧಿಸಿತ್ತು ಮತ್ತು ಸ್ವತಂತ್ರ ವರದಿಯನ್ನು ಸಿದ್ಧಪಡಿಸಲು ಊಮ್ಮನ್ ವಿ.ಊಮ್ಮನ್ ನೇತೃತ್ವದ ಮತ್ತೊಂದು ಸಮಿತಿಯನ್ನು ರಚಿಸಿತ್ತು. ಆ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿ.ಟಿ.ಥಾಮಸ್ ಸೇರಿದಂತೆ ಕೆಲವೇ ರಾಜಕಾರಣಿಗಳು ಗಾಡ್ಗೀಳ್ ಸಮಿತಿ ವರದಿಯ ಅನುಷ್ಠಾನಕ್ಕೆ ಒಲವು ವ್ಯಕ್ತಪಡಿಸಿದ್ದರು.







