20 ನಿಮಿಷದೊಳಗೆ ಎರಡು ಲೀಟರ್ ನೀರು ಕುಡಿದ ಮಹಿಳೆ ಮೃತ್ಯು !

Ms Ashley.| Photo: NDTV
ಇಂಡಿಯಾನಾ: ಅನಿರೀಕ್ಷಿತ ಹಾಗೂ ವಿರಳ ಆರೋಗ್ಯ ಸಮಸ್ಯೆಯಾದ ನೀರಿನ ನಂಜೀಕರಣದಿಂದ ಅಮೆರಿಕಾದ 35 ವರ್ಷದ ಮಹಿಳೆಯೊರ್ವಳು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ndtv.com ವರದಿ ಮಾಡಿದೆ.
ಇಂಡಿಯಾನಾ ನಿವಾಸಿಯಾದ ಆ್ಯಶ್ಲೆ ಸಮ್ಮರ್ಸ್ ಅನ್ನು ಆಸ್ಪತ್ರೆಗೆ ದಾಖಲಿಸಿದಾಗ, ಆಕೆ ತನ್ನ ಕುಟುಂಬದೊಂದಿಗೆ ಜುಲೈ 4ರಂದು ವಾರಾಂತ್ಯದ ಪ್ರವಾಸದಲ್ಲಿದ್ದರು ಎಂದು New York Post ವರದಿ ಮಾಡಿದೆ. ತೀವ್ರ ಸೆಖೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿದ್ದ ಆಕೆ, ಕೆಲವೇ ಕ್ಷಣಗಳಲ್ಲಿ ನಾಲ್ಕು ಬಾಟಲಿ ನೀರನ್ನು ಖಾಲಿ ಮಾಡಿದ್ದಾರೆ.
ಈ ಘಟನೆ ಬಗ್ಗೆ ಆ್ಯಶ್ಲೆಯ ಹಿರಿಯ ಸಹೋದರ ಮಾಹಿತಿ ಹಂಚಿಕೊಂಡಿದ್ದು, "ಆಕೆ ಕೇವಲ 20 ನಿಮಿಷಗಳಲ್ಲಿ ನಾಲ್ಕು ಬಾಟಲಿ ನೀರು ಕುಡಿದಳು ಎಂದು ಯಾರೋ ಹೇಳಿದರು. ಅಂದರೆ, ಒಂದು ಬಾಟಲಿ ಸರಾಸರಿ 16 ಔನ್ಸ್ ತೂಗುತ್ತದೆ. ಹೀಗಾಗಿ ಆಕೆ 64 ಔನ್ಸ್ (ಸುಮಾರು 2 ಲೀಟರ್) ನೀರನ್ನು ಕೇವಲ 20 ನಿಮಿಷಗಳ ಅವಧಿಯಲ್ಲಿ ಕುಡಿದಿದ್ದಾಳೆ. ಅದು ಅರ್ಧ ಗ್ಯಾಲನ್ನಷ್ಟು ನೀರು" ಎಂದು ಹೇಳಿದ್ದಾರೆ ಎಂದು People ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೀರಿನ ನಂಜೀಕರಣ ಎಂದು ಕರೆಯಲಾಗುವ ಹೈಪೊನಟ್ರೇಮಿಯಾದಿಂದ ಆ್ಯಶ್ಲೆ ಮೃತಪಟ್ಟಿದ್ದಾರೆ ಎಂದು ಆಕೆಯ ಕುಟುಂಬದವರಿಗೆ ವೈದ್ಯರು ತಿಳಿಸಿದ್ದಾರೆ. ಯಾವಾಗ ನಿಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಅಸಹಜವಾಗಿ ಕುಗ್ಗಿರುತ್ತದೊ ಆಗ ಈ ಏರುಪೇರು ಸಂಭವಿಸುತ್ತದೆ ಎಂದು ಮೇಯೊ ಕ್ಲಿನಿಕ್ ಹೇಳಿದೆ.







