USA | ಪಿಝ್ಝಾ ಆರ್ಡರ್ ನೆಪದಲ್ಲಿ ಕರೆಸಿಕೊಂಡು ತೆಲಂಗಾಣ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ

Photo | X/ NDTV
ಹೊಸದಿಲ್ಲಿ, ಜೂ. 7: ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಫಿಲಡೆಲ್ಫಿಯಾದಲ್ಲಿ ಪಿಝ್ಝಾ ಆರ್ಡರ್ ನ ನೆಪದಲ್ಲಿ ಕರೆಸಿಕೊಂಡು ತೆಲಂಗಾಣ ಮೂಲದ 28 ವರ್ಷದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೃತರನ್ನು ಅನ್ಶುಲ್ ಕುಂಚಾ ಎಂದು ಗುರುತಿಸಲಾಗಿದೆ. ಅವರು ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಹೆಚ್ಚುವರಿ ಆದಾಯಕ್ಕಾಗಿ ವಾರಾಂತ್ಯಗಳಲ್ಲಿ ಪಿಝ್ಝಾ ಡೆಲಿವರಿ ಸಿಬ್ಬಂದಿಯಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು.
ಶನಿವಾರ ರಾತ್ರಿ ಅನ್ಶುಲ್ ಅವರಿಗೆ ನಿರ್ಜನ ಪ್ರದೇಶವೊಂದಕ್ಕೆ ಪಿಝ್ಝಾ ಆರ್ಡರ್ ಬಂದಿತ್ತು. ಅವರು ಸ್ಥಳಕ್ಕೆ ತಲುಪಿದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ತಲೆಗೆ ಹಲವು ಬಾರಿ ಗುಂಡೇಟು ತಗುಲಿ ಅವರು ಮೃತಪಟ್ಟಿದ್ದಾರೆ. ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ.
ಅನ್ಶುಲ್ ಅವರ ಕುಟುಂಬಸ್ಥರ ಪ್ರಕಾರ, ಘಟನೆಯ ವೇಳೆ ಅವರ ಯಾವುದೇ ವಸ್ತುಗಳನ್ನು ಕಳವು ಮಾಡಲಾಗಿಲ್ಲ. ಇದರಿಂದ ಹತ್ಯೆಯ ಹಿಂದಿನ ಉದ್ದೇಶದ ಕುರಿತು ಅನುಮಾನಗಳು ಮೂಡಿವೆ. ದಾಳಿಯ ಸಮಯದಲ್ಲಿ ಚೀಲಗಳನ್ನು ಹಾಕಿಕೊಂಡಿದ್ದ ಇಬ್ಬರು ಮುಸುಕುಧಾರಿ ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಕೂಡ ಅನ್ಶುಲ್ ಅಮೆರಿಕದಲ್ಲಿ ದರೋಡೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಅವರ ಸರ, ಮೊಬೈಲ್ ಫೋನ್ ಹಾಗೂ ಹಣವನ್ನು ಕಳವು ಮಾಡಲಾಗಿತ್ತು. ಆದರೆ ಈ ರೀತಿಯ ಮಾರಣಾಂತಿಕ ದಾಳಿಯನ್ನು ಅವರು ಎದುರಿಸಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಅನ್ಶುಲ್ ಅವರ ಸಹೋದರಿ ತನ್ವಿ, ಪಿಝ್ಝಾ ಆರ್ಡರ್ ಮೂಲಕ ತಮ್ಮ ಸಹೋದರನನ್ನು ಹತ್ಯೆ ಮಾಡಲು ಸಂಚು ಹೂಡಲಾಗಿತ್ತು ಎಂದು ಆರೋಪಿಸಿದ್ದಾರೆ.
‘ನಿರ್ಜನ ಪ್ರದೇಶಕ್ಕೆ ಪಿಝ್ಝಾ ಡೆಲಿವರಿ ಮಾಡಲು ಹೇಳಲಾಗಿತ್ತು. ಬಳಿಕ ಅದು ನಕಲಿ ಆರ್ಡರ್ ಎಂಬುದು ತಿಳಿಯಿತು. ಅಲ್ಲಿ ಯಾರೂ ಇರಲಿಲ್ಲ. ನನ್ನ ಸಹೋದರನನ್ನು ಕೊಲ್ಲುವ ಉದ್ದೇಶದಿಂದಲೇ ಈ ಸಂಚು ರೂಪಿಸಲಾಗಿತ್ತು. ಇದರ ಹಿಂದಿನ ಉದ್ದೇಶ ಏನು ಎಂಬುದು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಅನ್ಶುಲ್ ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಅವರ ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ತರಲು ಕ್ರಮ ಕೈಗೊಳ್ಳುವಂತೆ ತನ್ವಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
‘ನನ್ನ ಸಹೋದರ ಪ್ರೀತಿಯಿಂದ ಮತ್ತು ಸದಾ ಸಂತೋಷದಿಂದ ಇರುವ ವ್ಯಕ್ತಿಯಾಗಿದ್ದರು. ನಕಲಿ ಪಿಝ್ಝಾ ಆರ್ಡರ್ ಮೂಲಕ ಅವರನ್ನು ಬಲೆಗೆ ಬೀಳಿಸಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಅವರ ಮೃತದೇಹವನ್ನು ಸಾಧ್ಯವಾದಷ್ಟು ಬೇಗ ಭಾರತಕ್ಕೆ ತರಬೇಕು ಎಂಬುದೇ ನಮ್ಮ ಮನವಿ’ ಎಂದು ಹೇಳಿದ್ದಾರೆ.
ಸೋಮವಾರ ಮೃತದೇಹವನ್ನು ಹಸ್ತಾಂತರಿಸಬಹುದೆಂದು ಅಧಿಕಾರಿಗಳು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಂತ್ಯಕ್ರಿಯೆಗಳನ್ನು ವಿಳಂಬವಿಲ್ಲದೆ ನೆರವೇರಿಸಲು ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾರ ಮೇಲೂ ನಿರ್ದಿಷ್ಟ ಅನುಮಾನವಿಲ್ಲ. ಆದರೆ ಹತ್ಯೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ತನ್ವಿ, ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸುವ ಬಗ್ಗೆ ಮರುಚಿಂತನೆ ಮಾಡುವಂತೆ ಪೋಷಕರಿಗೆ ಮನವಿ ಮಾಡಿದ್ದಾರೆ.
‘ನನ್ನ ಸಹೋದರ ತುಂಬಾ ಪ್ರೀತಿಯ ಮತ್ತು ಲವಲವಿಕೆಯಿಂದಿರುವ ವ್ಯಕ್ತಿಯಾಗಿದ್ದರು. ಅವರಿಗೆ ಅಮೆರಿಕಕ್ಕೆ ಹೋಗುವ ಅವಶ್ಯಕತೆಯೇ ಇರಲಿಲ್ಲ. ಆದರೂ ನಾವು ಅವರನ್ನು ಕಳುಹಿಸಿದ್ದೇವೆ. ಅವರು ಹೋಗಲು ಬಯಸಿರಲಿಲ್ಲ. ಆದರೆ ಅವರು ಹೋದರು. ಅದರ ಪರಿಣಾಮ ಏನಾಯಿತು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೇಡಿ’ ಎಂದು ಹೇಳಿದ್ದಾರೆ.
ಇದೇ ವೇಳೆ, ನ್ಯೂಯಾರ್ಕ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ಅನ್ಶುಲ್ ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದೆ.
‘ಫಿಲಡೆಲ್ಫಿಯಾದಲ್ಲಿ ಭಾರತೀಯ ಪ್ರಜೆ ಅನ್ಶುಲ್ ಕುಂಚಾ ಅವರ ಅಕಾಲಿಕ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದವರಿಗೆ ನಮ್ಮ ಸಂತಾಪಗಳು. ಕಾನ್ಸುಲೇಟ್ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಿದೆ’ ಎಂದು ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದೆ.






