ಆಧಾರ್ ನಿಯಮಗಳು ಮತ್ತಷ್ಟು ಬಿಗಿ; ಹೊಸ ಅಂಶಗಳೇನು?

PC: screengrab/freepik
ಹೊಸದಿಲ್ಲಿ: ಪೌರತ್ವದ ದಾಖಲೆಯಾಗಿರದೇ ಆಧಾರ್ ಕಾರ್ಡ್ ಕೇವಲ ಗುರುತಿನ ಪತ್ರ ಎಂಬ ಕಾರಣಕ್ಕೆ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಮುಂದಿನ ದಿನಗಳಲ್ಲಿ ಹೊಸ ವಯಸ್ಕರ ನೋಂದಣಿಗೆ ಮತ್ತು ಪರಿಷ್ಕರಣೆಗೆ ನಿಯಮಗಳನ್ನು ಬಿಗಿಗೊಳಿಸಿದೆ. ಅರ್ಜಿ ಸಲ್ಲಿಸುವವರ ಪಾಸ್ಪೋರ್ಟ್, ಪಡಿತರ ಚೀಟಿ, ಜನನ ಪ್ರಮಾಣಪತ್ರ ಮತ್ತು ಮೆಟ್ರಿಕ್ಯುಲೇಶನ್ ಪ್ರಮಾಣಪತ್ರಗಳ ದತ್ತಾಂಶ ಮಾಹಿತಿಯನ್ನು ಆನ್ ಲೈನ್ ಮೂಲಕ ಪಡೆದುಕೊಂಡು ಕಾರ್ಡ್ ಗಳನ್ನು ನೀಡಲು ನಿರ್ಧರಿಸಿದೆ.
ಆಧಾರ್ ಕಾಯ್ದೆಯ ಸೆಕ್ಷನ್ 9ರ ಪ್ರಕಾರ, ಆಧಾರ್ ಕಾರ್ಡ್ ಪೌರತ್ವದ ಪುರಾವೆ ಆಗಿರುವುದಿಲ್ಲ. ಆದರೆ ಇದೀಗ ಹೊಸ ನಿಯಮಗಳು ಕೇವಲ ಭಾರತೀಯ ಪೌರರು ಮಾತ್ರವೇ ವಿಶಿಷ್ಟ ಸಂಖ್ಯೆಯ ಕಾರ್ಡ್ ಪಡೆಯಲು ಸಾಧ್ಯವಾಗುವುದನ್ನು ಖಾತರಿಪಡಿಸಲಿವೆ.
ಕಳೆದ 15 ವರ್ಷಗಳಿಂದ ಮೃತಪಟ್ಟವರೂ ಸೇರಿದಂತೆ 140 ಕೋಟಿಗೂ ಅಧಿಕ ಆಧಾರ್ ಸಂಖ್ಯೆಗಳನ್ನು ಸೃಷ್ಟಿಸಲಾಗಿದೆ ಮತ್ತು ಬಹುತೇಕ ವಯಸ್ಕರು ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದೀಗ ಶಿಶುಗಳಿಗೂ ಆಧಾರ್ ಕಾರ್ಡ್ ನೀಡಲಾಗುತ್ತಿದ್ದು, ಹೊಸದಾಗಿ ನೋಂದಣಿಯಾಗುವ ವಯಸ್ಕರಿಗೆ ನಿಯಮಗಳನ್ನು ಸರ್ಕಾರ ಬಿಗಿಗೊಳಿಸಿದೆ.
ಅಕ್ರಮ ವಲಸೆಗಾರರು ನಕಲಿ ದಾಖಲೆಗಳ ಮೂಲಕ ವಿಶಿಷ್ಟ ಐಡಿ ಪಡೆಯುವುದನ್ನು ತಡೆಯಲು, ಕಳೆದ ಕೆಲ ವರ್ಷಗಳಿಂದ ಸರ್ಕಾರಿ ಪೋರ್ಟಲ್ ಮೂಲಕ ಕಠಿಣ ತಪಾಸಣೆಗಳನ್ನು ನಡೆಸಿಯೇ ಆಧಾರ್ ನೀಡಲಾಗುತ್ತಿದೆ.
ಈ ಮೊದಲು ಅಕ್ರಮ ವಲಸೆಗಾರರು ಕೂಡಾ ಆಧಾರ್ ಕಾರ್ಡ್ ಪಡೆದುಕೊಂಡು ಇತರ ಐಡಿಗಳನ್ನು ಪಡೆಯುವುದೂ ಸೇರಿದಂತೆ ಹಲವು ಇತರ ಉದ್ದೇಶಗಳಿಗೆ ಅದನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಯಾವುದೇ ಅಕ್ರಮ ವಲಸೆಗಾರರಿಗೆ ಆಧಾರ್ ಪಡೆಯುವುದು ಕಠಿಣವಾಗಲಿದೆ ಎಂದು ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ.







