ಚರ್ಚ್ಗಳ ಮೇಲಿನ ದಾಳಿಗಳ ಬಗ್ಗೆ ಪ್ರಧಾನಿ ಮೋದಿಗೆ AAP ಸಂಸದ ಸಂಜಯ್ ಸಿಂಗ್ ಪತ್ರ; ಕ್ರೈಸ್ತರ ರಕ್ಷಣೆಗೆ ತಕ್ಷಣ ಕ್ರಮಕ್ಕೆ ಆಗ್ರಹ

ಸಂಜಯ್ ಸಿಂಗ್ | Photo Credit : PTI
ಹೊಸದಿಲ್ಲಿ: ದೇಶದ ವಿವಿಧ ರಾಜ್ಯಗಳಲ್ಲಿ ಚರ್ಚ್ಗಳು, ಕ್ರೈಸ್ತ ಧಾರ್ಮಿಕ ಸಂಸ್ಥೆಗಳು, ಪಾದ್ರಿಗಳು ಹಾಗೂ ಕ್ರೈಸ್ತ ಸಮುದಾಯದ ಸದಸ್ಯರ ಮೇಲಿನ ದಾಳಿಗಳು ಹೆಚ್ಚುತ್ತಿವೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜು. 10ರಂದು ಬರೆದಿರುವ ಪತ್ರದಲ್ಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢ, ಹರಿಯಾಣ, ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದಿರುವ ಘಟನೆಗಳು ಪ್ರತ್ಯೇಕ ಪ್ರಕರಣಗಳಲ್ಲ. ಸಂಘಟಿತ ಬೆದರಿಕೆ, ಚರ್ಚ್ಗಳ ಮೇಲಿನ ದಾಳಿ, ಶಾಂತಿಯುತ ಪ್ರಾರ್ಥನೆಗೆ ಅಡ್ಡಿಪಡಿಸುವುದು ಹಾಗೂ ಧಾರ್ಮಿಕ ಮತಾಂತರದ ಆರೋಪಗಳನ್ನು ದುರುಪಯೋಗಪಡಿಸಿಕೊಂಡು ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪ್ರವೃತ್ತಿಯ ಭಾಗವಾಗಿವೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್ ಮೇಲೆ ದೊಡ್ಡ ಗುಂಪೊಂದು ದಾಳಿ ನಡೆಸಿ ಶಿಲುಬೆಗಳನ್ನು ಧ್ವಂಸಗೊಳಿಸಿದ್ದು, ಆವರಣಕ್ಕೆ ವ್ಯಾಪಕ ಹಾನಿ ಉಂಟುಮಾಡಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಪಶ್ಚಿಮ ಮೇದಿನಿಪುರದಲ್ಲಿ ಕ್ರೈಸ್ತ ದಂಪತಿಯ ಕೃತಜ್ಞತಾ ಪ್ರಾರ್ಥನಾ ಸಭೆ ಹಾಗೂ ವಿವಾಹ ಆರತಕ್ಷತೆಯನ್ನು ಅಡ್ಡಿಪಡಿಸಲಾಗಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಅವರ ಸಾಂಪ್ರದಾಯಿಕ ವೈವಾಹಿಕ ಚಿಹ್ನೆಗಳನ್ನು ಬಲವಂತವಾಗಿ ತೆಗೆದುಹಾಕಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಪುರ್ಬಾ ಬರ್ಧಮಾನ್ ಜಿಲ್ಲೆಯ ಫರೀದ್ಪುರ ಕಾಲೋನಿಯ ಗ್ರೇಸ್ ಚರ್ಚ್ ಮೇಲೆ ರವಿವಾರದ ಪ್ರಾರ್ಥನೆಯ ವೇಳೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿರುವ ಅವರು, ಈ ಕುರಿತು ಮುಂಚಿತವಾಗಿಯೇ ಪೊಲೀಸರಿಗೆ ದೂರು ನೀಡಲಾಗಿದ್ದರೂ ಚರ್ಚ್ ಧ್ವಂಸಗೊಳಿಸಿ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪಾದ್ರಿಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕ್ರೈಸ್ತರ ಮೇಲಿನ ದಾಳಿಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿರುವ ಸಿಂಗ್, ರಾಯ್ ಬರೇಲಿಯ ಮನೆ ಚರ್ಚ್ ಮೇಲೆ ಚಾಕು ಹಾಗೂ ಬಿದಿರಿನ ಕೋಲುಗಳನ್ನು ಹಿಡಿದಿದ್ದ ಗುಂಪು ದಾಳಿ ನಡೆಸಿ, ಪಾದ್ರಿ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದೆ. ಚರ್ಚ್ ಆಸ್ತಿಯನ್ನು ಧ್ವಂಸಗೊಳಿಸಿ, ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ಥಳದಿಂದ ಪಲಾಯನ ಮಾಡುವಂತಾಗಿದೆ ಎಂದು ಹೇಳಿದ್ದಾರೆ.
ಉನ್ನಾವ್, ಕೌಶಾಂಬಿ, ಗೋರಖ್ಪುರ, ಜಾನ್ಪುರ, ಸಹರಾನ್ಪುರ, ಮಹಾರಾಜಗಂಜ್ ಹಾಗೂ ಕಾನ್ಪುರದಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ. ಪ್ರಾರ್ಥನಾ ಸಭೆಗಳಿಗೆ ಅಡ್ಡಿಪಡಿಸುವುದು, ಪಾದ್ರಿಗಳು ಮತ್ತು ಆರಾಧಕರನ್ನು ಬಂಧಿಸುವುದು, ಚರ್ಚ್ಗಳನ್ನು ಧ್ವಂಸಗೊಳಿಸುವುದು ಹಾಗೂ ಮತಾಂತರ ವಿರೋಧಿ ಕಾನೂನುಗಳಡಿ ಪ್ರಕರಣ ದಾಖಲಿಸುವುದು ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮಹಾರಾಜಗಂಜ್ ನಲ್ಲಿ ಚರ್ಚ್ ಅನ್ನು ಧ್ವಂಸಗೊಳಿಸಿ ಬೈಬಲ್ ಗಳು, ಕುರ್ಚಿಗಳು, ಪ್ರವಚನಪೀಠ ಹಾಗೂ ಧ್ವನಿ ಉಪಕರಣಗಳನ್ನು ನಾಶಪಡಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಕ್ರೈಸ್ತ ಮಿಷನರಿಗಳ ವಿರುದ್ಧ ಧಾರ್ಮಿಕ ಮತಾಂತರದ ಸುಳ್ಳು ಆರೋಪಗಳನ್ನು ಹೊರಿಸಿದ ಬಳಿಕ ಕೋಮು ಉದ್ವಿಗ್ನತೆ ಉಂಟಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ. ಕ್ರೈಸ್ತರ ಪ್ರಾರ್ಥನಾ ಸಭೆಗಳು ಹಾಗೂ ಕ್ರಿಸ್ಮಸ್ ಆಚರಣೆಗಳಿಗೆ ಅಡ್ಡಿಪಡಿಸಲಾಗಿದ್ದು, ಇದರಿಂದ ಸಮುದಾಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ. ಶಾಂತಿಯುತ ಧಾರ್ಮಿಕ ಸಭೆಗಳಿಗೆ ಅಡ್ಡಿಪಡಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿಲ್ಲ. ಕೆಲವು ಸ್ಥಳೀಯ ರಾಜಕೀಯ ಕಾರ್ಯಕರ್ತರ ಪಾತ್ರದ ಬಗ್ಗೆ ವರದಿಗಳೂ ಬಂದಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಾಂತಿಯುತ ಪ್ರಾರ್ಥನಾ ಸಭೆಗಳನ್ನು ನಡೆಸಲು ಅನುಮತಿ ಕೋರಿ ಕ್ರೈಸ್ತ ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಮೂಲಭೂತ ಹಕ್ಕುಗಳ ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ ಎಂದೂ ಅವರು ಹೇಳಿದ್ದಾರೆ.
ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಹಾಗೂ ಬಲವಂತದ ಸ್ಥಳಾಂತರದ ಮೂಲಕ ಕ್ರೈಸ್ತರನ್ನು ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಸಿಂಗ್, ಭರಂದಾ ಗ್ರಾಮದಲ್ಲಿ ತಮ್ಮ ಧರ್ಮವನ್ನು ತ್ಯಜಿಸಲು ನಿರಾಕರಿಸಿದ 26 ಕ್ರೈಸ್ತ ಕುಟುಂಬಗಳನ್ನು ಮನೆಗಳಿಂದ ಹೊರಹಾಕಲಾಗಿದ್ದು, ಪೊಲೀಸ್ ರಕ್ಷಣೆಯಲ್ಲಿ ಬಯಲಿನಲ್ಲಿ ವಾಸಿಸುವಂತಾಗಿದೆ ಎಂದು ಹೇಳಿದ್ದಾರೆ.
ತೋಡೋಹೂರ್ ಗ್ರಾಮದಲ್ಲಿ ನಾಲ್ವರು ಶಾಲಾ ಮಕ್ಕಳಿರುವ ಬುಡಕಟ್ಟು ಕ್ರೈಸ್ತ ಕುಟುಂಬಕ್ಕೆ ಧರ್ಮ ತ್ಯಜಿಸುವಂತೆ ಅಥವಾ ಗ್ರಾಮ ತೊರೆಯುವಂತೆ ಬೆದರಿಕೆ ಹಾಕಲಾಗಿದ್ದು, ಬಳಿಕ ಅವರು ಕಾಡಿಗೆ ಆಶ್ರಯ ಪಡೆಯಬೇಕಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹರ್ಯಾಣದಲ್ಲಿ ಕ್ರೈಸ್ತರ ಜನಸಂಖ್ಯೆ ಶೇಕಡಾ ಒಂದಕ್ಕಿಂತ ಕಡಿಮೆಯಿದ್ದರೂ, ಚರ್ಚ್ ನಿರ್ಮಾಣಕ್ಕೆ ಸಂಘಟಿತ ವಿರೋಧ ವ್ಯಕ್ತವಾಗುತ್ತಿದೆ ಹಾಗೂ ಕ್ರಿಸ್ಮಸ್ ಆಚರಣೆಗಳಿಗೆ ಪದೇ ಪದೇ ಅಡ್ಡಿಪಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಪಾಮ್ ಸಂಡೆ ಮೆರವಣಿಗೆಗೆ ಅನುಮತಿ ನಿರಾಕರಿಸಿರುವುದನ್ನು ಕ್ರೈಸ್ತ ಸಂಘಟನೆಗಳು ತಾರತಮ್ಯದ ಕ್ರಮ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಗೆ ವಿರುದ್ಧವಾದ ನಡೆ ಎಂದು ಟೀಕಿಸಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗಳನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳೆಂದು ಪರಿಗಣಿಸಲಾಗುವುದಿಲ್ಲ. ಶಿಕ್ಷೆಯ ಭಯವಿಲ್ಲದೆ ಚರ್ಚ್ಗಳ ಮೇಲೆ ದಾಳಿ ನಡೆಸುವುದು, ಭಕ್ತರನ್ನು ಬೆದರಿಸುವುದು, ಪೂಜಾ ಸ್ಥಳಗಳನ್ನು ಧ್ವಂಸಗೊಳಿಸುವುದು ಹಾಗೂ ಧಾರ್ಮಿಕ ಮತಾಂತರದ ಆರೋಪಗಳನ್ನು ದುರುಪಯೋಗಪಡಿಸಿಕೊಳ್ಳುವುದು ಹೆಚ್ಚುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಸಂವಿಧಾನದ 14, 15, 21, 25 ಹಾಗೂ 26ನೇ ವಿಧಿಗಳನ್ನು ಉಲ್ಲೇಖಿಸಿರುವ ಅವರು, ಕಾನೂನಿನ ಮುಂದೆ ಸಮಾನತೆ ಹಾಗೂ ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವು ಜಾರಿಗೊಳಿಸಬೇಕಾದ ಸಾಂವಿಧಾನಿಕ ಹಕ್ಕುಗಳಾಗಿವೆ ಎಂದು ಹೇಳಿದ್ದಾರೆ. ಪೂಜಾ ಸ್ಥಳಗಳ ಮೇಲಿನ ಪ್ರತಿಯೊಂದು ದಾಳಿ ಹಾಗೂ ನಾಗರಿಕರು ತಮ್ಮ ಧರ್ಮವನ್ನು ಶಾಂತಿಯುತವಾಗಿ ಆಚರಿಸುವುದನ್ನು ತಡೆಯುವ ಪ್ರತಿಯೊಂದು ಪ್ರಯತ್ನವೂ ಸಂವಿಧಾನದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದಿದ್ದಾರೆ.
'ಡಬಲ್ ಎಂಜಿನ್ ಸರ್ಕಾರ' ಉತ್ತಮ ಆಡಳಿತ, ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ಭರವಸೆ ನೀಡುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ವಾಸ್ತವ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ ಎಂದು ಸಿಂಗ್ ಟೀಕಿಸಿದ್ದಾರೆ. ಕ್ರೈಸ್ತರು ಹಾಗೂ ಇತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚುತ್ತಿದ್ದು, ಕೋಮು ದ್ವೇಷ ಹರಡುವ ಸಂಘಟನೆಗಳು ಹೆಚ್ಚಿನ ಧೈರ್ಯದಿಂದ ಕಾರ್ಯನಿರ್ವಹಿಸುತ್ತಿವೆ. ಪದೇ ಪದೇ ದಾಳಿಗಳು ನಡೆದರೂ ಕೇಂದ್ರ ಸರ್ಕಾರ ಮೌನ ವಹಿಸಿರುವುದು ತಪ್ಪಿತಸ್ಥರಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿಯಾಗಿ ಧರ್ಮ, ಜಾತಿ ಅಥವಾ ರಾಜಕೀಯ ನಂಬಿಕೆಯನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ರಕ್ಷಣೆ ನೀಡುವುದು ನಿಮ್ಮ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ಮೋದಿ ಅವರಿಗೆ ನೆನಪಿಸಿರುವ ಸಿಂಗ್, ದೇಶಾದ್ಯಂತ ಚರ್ಚ್ಗಳು ಹಾಗೂ ಕ್ರೈಸ್ತ ಸಮುದಾಯದ ಮೇಲಿನ ದಾಳಿಗಳನ್ನು ಸಾರ್ವಜನಿಕವಾಗಿ ಖಂಡಿಸಬೇಕು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ದಿಲ್ಲಿ ಸೇರಿದಂತೆ ಪೀಡಿತ ರಾಜ್ಯಗಳಲ್ಲಿನ ಘಟನೆಗಳ ಕುರಿತು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಕಾಲಮಿತಿಯ ತನಿಖೆಗೆ ಆದೇಶಿಸಬೇಕು, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ, ಬೆದರಿಕೆ ಹಾಗೂ ವಿಧ್ವಂಸ ನಡೆಸಿದವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಮತಾಂತರ ವಿರೋಧಿ ಕಾನೂನುಗಳ ದುರುಪಯೋಗವನ್ನು ತಡೆಯಬೇಕು ಹಾಗೂ ಕೋಮು ದ್ವೇಷ ಪ್ರಚೋದಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ದೃಢವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರದ ಕೊನೆಯಲ್ಲಿ, ಭಾರತದ ಶ್ರೇಷ್ಠತೆ ಸಂವಿಧಾನದ ಅಡಿಯಲ್ಲಿ ಪ್ರತಿಯೊಂದು ಧರ್ಮಕ್ಕೂ ಸಮಾನ ಗೌರವ ನೀಡುವ ಮೌಲ್ಯದ ಮೇಲೆ ನಿಂತಿದೆ ಎಂದು ಹೇಳಿರುವ ಸಿಂಗ್, ಪಕ್ಷಪಾತ ರಾಜಕೀಯವನ್ನು ಮೀರಿ ಸಾಂವಿಧಾನಿಕ ಜವಾಬ್ದಾರಿಗಳನ್ನು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ನಿರ್ವಹಿಸಿ, ಯಾವುದೇ ಭಾರತೀಯನು ತನ್ನ ಧರ್ಮದ ಕಾರಣಕ್ಕೆ ಭಯದಲ್ಲಿ ಬದುಕುವಂತಾಗಬಾರದು ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ದೇಶವು ಸರ್ಕಾರದಿಂದ ಮೌನವಲ್ಲ, ನಿರ್ಣಾಯಕ ಕ್ರಮವನ್ನು ನಿರೀಕ್ಷಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.






