ಸರಕಾರದ ಅಧಿಕೃತ ಸಭೆಗಳಲ್ಲಿ ದಿಲ್ಲಿ ಸಿಎಂ ಪತಿ ಭಾಗಿ : ಆಪ್ ಆರೋಪ

Photo | indiatoday
ಹೊಸದಿಲ್ಲಿ : ಸರಕಾರದ ಅಧಿಕೃತ ಸಭೆಯಲ್ಲಿ ದಿಲ್ಲಿ ಸಿಎಂ ರೇಖಾ ಗುಪ್ತಾ ಅವರು ತನ್ನ ಪತಿಗೆ ಭಾಗವಹಿಸಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಇದು ಅಸಂವಿಧಾನಿಕ ಮತ್ತು ಸ್ವಜನಪಕ್ಷಪಾತಕ್ಕೆ ಉದಾಹರಣೆ ಎಂದು ಆಪ್ ಪಕ್ಷವು ಟೀಕಿಸಿದೆ.
ಆಪ್ ನಾಯಕ ಸೌರಭ್ ಭಾರದ್ವಾಜ್ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಜೊತೆ ಅವರ ಪತಿ ಮನೀಶ್ ಗುಪ್ತಾ ಸರಕಾರಿ ಸಭೆಯಲ್ಲಿ ಭಾಗವಹಿಸಿರುವ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ಇದೇ ಪೋಟೊವನ್ನು ಗುಪ್ತಾ ಅವರ ಎಕ್ಸ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಆಪ್ ದಿಲ್ಲಿ ಆಡಳಿತವನ್ನು ಜನಪ್ರಿಯ ವೆಬ್ ಸರಣಿ "ಫುಲೇರಾ ಪಂಚಾಯತ್" ಗೆ ಹೋಲಿಸಿದೆ. ದಿಲ್ಲಿಯಲ್ಲಿ ಫುಲೇರಾ ಪಂಚಾಯತ್ ಸರಕಾರ ನಡೆಯುತ್ತಿದೆಯೇ? ಮುಖ್ಯಮಂತ್ರಿ ರೇಖಾ ಗುಪ್ತಾ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಅವರ ಪಕ್ಕದಲ್ಲಿ ಅವರ ಪತಿ ಮನೀಶ್ ಗುಪ್ತಾ ಕುಳಿತುಕೊಂಡಿದ್ದಾರೆ ಎಂದು ಹೇಳಿದೆ.
ಸಿಎಂ ಪತಿ ನಿರಂತರವಾಗಿ ಅಧಿಕೃತ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು ಮತ್ತು ತಪಾಸಣೆಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಆಪ್ ನಾಯಕ ಸೌರಭ್ ಭಾರದ್ವಾಜ್ ಟೀಕಿಸಿದ್ದಾರೆ.
“ದಿಲ್ಲಿ ಸರಕಾರ ಫುಲೇರಾ ಪಂಚಾಯತ್ ಆಗಿ ಬದಲಾಗುತ್ತಿದೆ. ದಿಲ್ಲಿಯಲ್ಲಿ ಸಿಎಂ ಪತಿ ಅಧಿಕೃತ ಸಭೆಗಳಲ್ಲಿ ಕುಳಿತಿರುವುದನ್ನು ಕಾಣಬಹುದು. ಇದು ಸಂಪೂರ್ಣವಾಗಿ ಸಂವಿಧಾನಬಾಹಿರ. ರಾಷ್ಟ್ರದ ರಾಜಧಾನಿಯಲ್ಲಿ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ನಿಯಮಗಳನ್ನು ಈ ರೀತಿಯಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಸೌರಭ್ ಭಾರದ್ವಾಜ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.







