4 ತಿಂಗಳಲ್ಲಿ 20 ಗಾಯಗಳಿಂದ ಚೇತರಿಸಿಕೊಂಡು ಕಂಚು ಗೆದ್ದ ಆರತಿ ಕಸ್ತೂರಿ ರಾಜ್

Photo: X
ಹೊಸದಿಲ್ಲಿ : ರೋಲರ್ ಸ್ಕೇಟರ್ ಆರತಿ ಕಸ್ತೂರಿ ರಾಜ್ ಮೇ ತಿಂಗಳಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರ 20ಕ್ಕೂ ಅಧಿಕ ಗಾಯಗಳಿಗೆ 26 ಹೊಲಿಗೆಗಳನ್ನು ಹಾಕಲಾಗಿತ್ತು. ಹಣೆಯ ಕೆಲವು ಗಾಯಗಳು ಆಳವಾಗಿದ್ದವು. ಆದರೆ, ವೈದ್ಯೆಯಾಗಿರುವ ತಾಯಿಯ ನಿರಂತರ ಬೆಂಬಲದೊಂದಿಗೆ, ಆರತಿ ಸರಿಯಾದ ಸಮಯದಲ್ಲಿ ಅಸಾಧಾರಣ ಚೇತರಿಕೆ ಕಂಡರು. ಈಗ ಅವರು ಏಶ್ಯನ್ ಗೇಮ್ಸ್ ನಲ್ಲಿ ರೋಲರ್ ಸ್ಕೇಟಿಂಗ್ ನಲ್ಲಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಎಂಬಿಬಿಎಸ್ ಮಾಡಿರುವ ಆರತಿ, ಈಗ ತನ್ನ ಕ್ರೀಡಾ ಗುರಿಯನ್ನು ಸಾಧಿಸಿದ ಬಳಿಕ, ತಾಯಿ ನಡೆಸುತ್ತಿರುವ ಆಸ್ಪತ್ರೆಯಲ್ಲಿ ತಾಯಿಗೆ ನೆರವಾಗಲಿದ್ದಾರೆ.ಏಶ್ಯನ್ ಗೇಮ್ಸ್ ಆರಂಭಗೊಳ್ಳುವ ಸರಿಯಾಗಿ ನಾಲ್ಕು ತಿಂಗಳ ಮೊದಲು 29 ವರ್ಷದ ಆರತಿ ತರಬೇತಿಯ ವೇಳೆ ಗಾಯಗೊಂಡಿದ್ದರು.
“ಈ ವರ್ಷದ ಮೇ 26ರಂದು ಭಯಾನಕ ಘಟನೆ ನಡೆಯಿತು. ನನ್ನ ಹಣೆಯಲ್ಲಿ ಆಳವಾದ ಗಾಯಗಳಿದ್ದವು. ನನಗೆ 26 ಹೊಲಿಗೆಗಳನ್ನು ಹಾಕಲಾಯಿತು’’ ಎಂದು ಮಹಿಳೆಯರ 3000 ಮೀಟರ್ ತಂಡ ರಿಲೇಯಲ್ಲಿ ಕಂಚಿನ ಪದಕ ಗೆದ್ದ ಬಳಿಕ ಪಿಟಿಐಯೊಂದಿಗೆ ಮಾತನಾಡಿದ ಆರತಿ ಹೇಳಿದರು.
ಚೆನ್ನೈನವರಾಗಿರುವ ಆರತಿಯ ತಂದೆ ಉದ್ಯಮಿ ಸಿ. ಕಸ್ತೂರಿ ರಾಜ್ ಮತ್ತು ತಾಯಿ ಪ್ರಸೂತಿ ತಜ್ಞೆ ಮಲಾ ರಾಜ್. ಆರತಿ ಏಳು ವರ್ಷದಲ್ಲೇ ಸ್ಕೇಟಿಂಗ್ ಅಭ್ಯಾಸ ಆರಂಭಿಸಿದರು.
“ಇದೊಂದು ಕನಸು ನನಸಾದ ಕ್ಷಣ. ನಾನು ಏಳರ ಹರೆಯದಲ್ಲೇ ಈ ಕ್ರೀಡೆಯ ಕಡೆಗೆ ಆಸಕ್ತಿ ವಹಿಸಿದೆ. ಅಂದಿನಿಂದ ಅದು ನನಗೆ ಮೋಹವಾಗಿಬಿಟ್ಟಿದೆ’’ ಎಂದು ತಮ್ಮ ಅನುಭವ ಹಂಚಿಕೊಂಡರು.







