Assam | ಸಾಮಾಜಿಕ ಕಾರ್ಯಕರ್ತ ಆಸಿಫ್ ಮುಜ್ತಬಾ ಪೊಲೀಸ್ ವಶಕ್ಕೆ
ತೆರವು ಕಾರ್ಯಾಚರಣೆಯ ಸಂತ್ರಸ್ತರನ್ನು ಭೇಟಿಯಾಗುತ್ತಿದ್ದಾಗ ವಶಕ್ಕೆ ಪಡೆದ ಪೊಲೀಸರು

ಆಸಿಫ್ ಮುಜ್ತಬಾ | Photo Credit: theobserverpost.com
ಲಖಿಂಪುರ: ಅಸ್ಸಾಂನಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದವರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುತ್ತಿದ್ದ 'ಮೈಲ್ಸ್ ಟು ಸ್ಮೈಲ್ ಫೌಂಡೇಶನ್' ಸಂಸ್ಥಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಆಸಿಫ್ ಮುಜ್ತಬಾ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ತಮ್ಮನ್ನು ಯಾವ ಕಾನೂನು ಸೆಕ್ಷನ್ ಗಳ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು theobserverpost.com ವರದಿ ಮಾಡಿದೆ.
ರಾಜ್ಯದಲ್ಲಿ ಮುಸ್ಲಿಮರ ಮೇಲೆ ಪರಿಣಾಮ ಬೀರುತ್ತಿರುವ ಕಟ್ಟಡಗಳ ತೆರವು ಮತ್ತು ಗಡೀಪಾರು ಪ್ರಕ್ರಿಯೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಮುಜ್ತಬಾ ಮತ್ತು ಅವರ ತಂಡ ತಿಳಿಸಿದೆ. ಆದರೆ, ಅವರ ಬಂಧನ ಅಥವಾ ವಶಕ್ಕೆ ಪಡೆದಿರುವ ಕುರಿತು ಅಸ್ಸಾಂ ಪೊಲೀಸರು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ತಮ್ಮನ್ನು ವಶಕ್ಕೆ ಪಡೆದಿರುವ ಕುರಿತು ಮುಜ್ತಬಾ 'ದಿ ಅಬ್ಸರ್ವರ್ ಪೋಸ್ಟ್' ಜೊತೆ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ. ಸದ್ಯ ಅವರನ್ನು ಲಖಿಂಪುರದ ಸ್ಥಳೀಯ ಪೊಲೀಸ್ ಠಾಣೆಯೊಂದರಲ್ಲಿ ಇರಿಸಲಾಗಿದೆ. ಠಾಣೆಗೆ ಕರೆತಂದು ಸುಮಾರು ಎರಡು ಗಂಟೆಗಳಾದರೂ ತಮ್ಮ ವಿರುದ್ಧದ ಕ್ರಮದ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
"ನಾನು ಇಲ್ಲಿಗೆ ಬಂದು ಎರಡು ಗಂಟೆಗಳಾಗಿವೆ. ಯಾವ ಕಾನೂನು ಸೆಕ್ಷನ್ ಗಳ ಅಡಿಯಲ್ಲಿ ನನ್ನನ್ನು ವಶಕ್ಕೆ ಪಡೆಯಲಾಗಿದೆ, ಬಂಧಿಸಲಾಗುತ್ತಿದೆಯೇ ಅಥವಾ ಇಲ್ಲವೇ, ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಯಾವುದೂ ಸ್ಪಷ್ಟವಾಗಿಲ್ಲ. ಎರಡು ಗಂಟೆಗಳಿಂದ ನನ್ನನ್ನು ಸುಮ್ಮನೆ ಕೂರಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (SP) ಠಾಣೆಯಲ್ಲಿದ್ದು, ತಮ್ಮೊಂದಿಗೆ ಮಾತನಾಡಿದ್ದಾರೆ ಎಂದು ಮುಜ್ತಬಾ ತಿಳಿಸಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡುವುದಾಗಿ ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಪೊಲೀಸರು ಹಲವು ಕಡೆಗಳಲ್ಲಿ ತಮ್ಮನ್ನು ತಡೆದಿದ್ದರು ಎಂದು ಮುಜ್ತಬಾ ಹೇಳಿದ್ದಾರೆ. ಕಟ್ಟಡಗಳ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದವರನ್ನು ತಾನು ಭೇಟಿಯಾಗುವುದು ಅಧಿಕಾರಿಗಳಿಗೆ ಇಷ್ಟವಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ಆ ಪ್ರದೇಶಕ್ಕೆ ಏಕೆ ಹೋಗಿದ್ದೆ, ಅಲ್ಲಿಗೆ ಹೇಗೆ ತಲುಪಿದೆ, ಭೇಟಿಯ ಉದ್ದೇಶವೇನು ಹಾಗೂ ಸಂತ್ರಸ್ತರನ್ನು ಭೇಟಿ ಮಾಡುವ ಹಿಂದಿನ ಕಾರಣಗಳೇನು ಎಂಬ ಬಗ್ಗೆ ಪೊಲೀಸರು ಸುದೀರ್ಘವಾಗಿ ಪ್ರಶ್ನಿಸಿದ್ದರು. ಈ ಪ್ರಶ್ನೆಗಳು ಅನಗತ್ಯವಾಗಿದ್ದವು ಎಂದು ಅವರು ತಿಳಿಸಿದ್ದಾರೆ.
ಕಳೆದ ಎಂಟು ದಿನಗಳಿಂದ ಅಸ್ಸಾಂನಲ್ಲಿದ್ದು, ಪರಿಹಾರ ಕಾರ್ಯಗಳು ಮತ್ತು ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಮುಜ್ತಬಾ ಹೇಳಿದ್ದಾರೆ. ಆದರೆ, ಎಷ್ಟು ಜಿಲ್ಲೆಗಳು ಅಥವಾ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ ಎಂಬ ವಿವರ ನೀಡುವಷ್ಟರಲ್ಲಿ ಅವರೊಂದಿಗಿನ ಸಂಭಾಷಣೆ ಕೊನೆಗೊಂಡಿದೆ.
ಮುಜ್ತಬಾ ಮಾನವೀಯ ನೆರವು ಕಾರ್ಯಕರ್ತ, ಶಿಕ್ಷಣ ತಜ್ಞ ಹಾಗೂ ಎನ್ವಿರಾನ್ಮೆಂಟಲ್ ಇಂಜಿನಿಯರ್ ಆಗಿದ್ದಾರೆ. ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯಲ್ಲಿ ವ್ಯಾಸಂಗ ಮಾಡಿದ್ದಾರೆ. 'ಮೈಲ್ಸ್ ಟು ಸ್ಮೈಲ್ ಫೌಂಡೇಶನ್' (Miles2Smile Foundation) ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿರುವ ಅವರು, ಕೋಮು ಹಿಂಸಾಚಾರ, ಗುಂಪು ಹಲ್ಲೆ ಮತ್ತು ಮನೆಗಳ ಧ್ವಂಸ ಕಾರ್ಯಾಚರಣೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಿಕಾ ಕೇಂದ್ರಗಳನ್ನು ನಡೆಸುವ 'ಶಾಗಿರ್ದ್ ಫೌಂಡೇಶನ್' (Shaagird Foundation)ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಜ್ತಬಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧ ನಡೆದ ಶಾಹೀನ್ ಬಾಗ್ ಪ್ರತಿಭಟನೆಯ ಸಹ-ಸಂಘಟಕರಾಗಿದ್ದರು. 2020ರ ದಿಲ್ಲಿ ಹಿಂಸಾಚಾರದ ಬಳಿಕ ಸಂತ್ರಸ್ತ ಮಕ್ಕಳಿಗಾಗಿ ಶಾಲೆಗಳನ್ನು ತೆರೆಯುವುದು ಸೇರಿದಂತೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಮೂಲಕ ಅವರ ಫೌಂಡೇಶನ್ ತನ್ನ ಕೆಲಸವನ್ನು ಆರಂಭಿಸಿತು.
ಅವರ ಸಂಸ್ಥೆ ಕಳೆದ ಕೆಲವು ಸಮಯದಿಂದ ಅಸ್ಸಾಂನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. 2025ರ ಸೆಪ್ಟೆಂಬರ್ ನಲ್ಲಿ 'ಮೈಲ್ಸ್ ಟು ಸ್ಮೈಲ್' ತಂಡವು ಗೋಲ್ಪಾರಾ ಮತ್ತು ಧುಬ್ರಿಗೆ ಭೇಟಿ ನೀಡಿ, ಅಲ್ಲಿ ನಡೆದ ಬೃಹತ್ ಮನೆಗಳ ಧ್ವಂಸ ಕಾರ್ಯಾಚರಣೆಯ ಬಳಿಕದ ಪರಿಸ್ಥಿತಿಯನ್ನು ದಾಖಲಿಸಿಕೊಂಡಿತ್ತು. ತಮ್ಮ ಸಮೀಕ್ಷೆಯ ಪ್ರಕಾರ, 25,000ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಲಾಗಿದ್ದು, ಇವುಗಳಲ್ಲಿ ಬಹುಪಾಲು ಮುಸ್ಲಿಂ ಕುಟುಂಬಗಳಿಗೆ ಸೇರಿದ್ದವು ಎಂದು ಫೌಂಡೇಶನ್ ತಿಳಿಸಿತ್ತು.
ಕಳೆದ ನಾಲ್ಕು ವರ್ಷಗಳಲ್ಲಿ ಅಸ್ಸಾಂನಲ್ಲಿ ನೂರಾರು ಮುಸ್ಲಿಂ ಹಳ್ಳಿಗಳನ್ನು ನೆಲಸಮಗೊಳಿಸಲಾಗಿದ್ದು, ಇದರಿಂದ 50,000ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗಿವೆ ಎಂದು ಮುಜ್ತಬಾ ಹೇಳಿದ್ದಾರೆ. ಇದನ್ನು 'ಮಾನವೀಯ ಬಿಕ್ಕಟ್ಟು' ಎಂದು ಅಭಿಪ್ರಾಯಪಟ್ಟಿರುವ ಅವರು, ಸಂತ್ರಸ್ತರಿಗೆ ನೆರವಾಗಲು ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಆದರೆ, ಅಸ್ಸಾಂ ಸರ್ಕಾರವು ಒತ್ತುವರಿ ತೆರವು ಕಾರ್ಯಾಚರಣೆಗಳು ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿನ ಅಕ್ರಮ ಒತ್ತುವರಿಗಳನ್ನು ಗುರಿಯಾಗಿಸಿಕೊಂಡಿವೆಯೇ ಹೊರತು, ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತೀಯ ಕಾನೂನಿನ ಪ್ರಕಾರ, ಬಂಧಿತ ವ್ಯಕ್ತಿಗೆ ಬಂಧನದ ಕಾರಣಗಳನ್ನು ತಿಳಿಸಬೇಕು ಮತ್ತು 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ಆದರೆ, ತಮ್ಮನ್ನು ಬಂಧಿಸಲಾಗಿದೆಯೇ ಅಥವಾ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆಯೇ ಹಾಗೂ ಯಾವ ಕಾನೂನು ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ ಎಂದು ಮುಜ್ತಬಾ ತಿಳಿಸಿದ್ದಾರೆ.






