ʼನ್ಯೂಸ್ಲಾಂಡ್ರಿʼ ಪತ್ರಕರ್ತರ ವಿರುದ್ಧದ ಮಾನಹಾನಿಕರ ಪೋಸ್ಟ್ಗಳನ್ನು ತೆಗೆದು ಹಾಕಲು ಅಭಿಜಿತ್ ಅಯ್ಯರ್ಗೆ ದಿಲ್ಲಿ ಹೈಕೋರ್ಟ್ ಗಡುವು
ʼಇಂತಹ ಪೋಸ್ಟ್ಗಳನ್ನು ನಾಗರಿಕ ಸಮಾಜದಲ್ಲಿ ಅನುಮತಿಸಲಾಗುವುದಿಲ್ಲʼ ಎಂದ ನ್ಯಾಯಾಲಯ

ಅಭಿಜಿತ್ ಅಯ್ಯರ್-ಮಿತ್ರ (Photo credit: NDTV)
ಹೊಸದಿಲ್ಲಿ: ನ್ಯೂಸ್ ಲಾಂಡ್ರಿ ಕಾರ್ಯನಿರ್ವಾಹಕ ಸಂಪಾದಕಿ ಮನೀಷಾ ಪಾಂಡೆ ಮತ್ತು ಇತರ ಎಂಟು ಮಹಿಳಾ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಮಾಡಿದ ಮಾನಹಾನಿಕರ ಪೋಸ್ಟ್ಗಳನ್ನು ತೆಗೆದುಹಾಕಲು ಬಲಪಂಥೀಯ ಲೇಖಕ, ವಾಗ್ಮಿ ಅಭಿಜಿತ್ ಅಯ್ಯರ್-ಮಿತ್ರ ಅವರಿಗೆ ದಿಲ್ಲಿ ಹೈಕೋರ್ಟ್ ಸೂಚಿಸಿದೆ, ತಪ್ಪಿದ್ದಲ್ಲಿ ಎಫ್ಐಆರ್ ದಾಖಲಿಸಲು ಆದೇಶಿಸುವುದಾಗಿ ಎಚ್ಚರಿಕೆ ನೀಡಿದೆ.
ಅಭಿಜಿತ್ ಅಯ್ಯರ್-ಮಿತ್ರ ಅವರಿಗೆ ಆದೇಶವನ್ನು ಪಾಲಿಸಲು ನ್ಯಾಯಾಲಯ ಐದು ಗಂಟೆಗಳ ಕಾಲಾವಕಾಶ ನೀಡಿದೆ. ಇಂತಹ ಪೋಸ್ಟ್ಗಳನ್ನು ʼಯಾವುದೇ ನಾಗರಿಕ ಸಮಾಜದಲ್ಲಿ ಅನುಮತಿಸಲಾಗುವುದಿಲ್ಲʼ ಎಂದು ಹೇಳಿದೆ.
ದೂರುದಾರರನ್ನು ಅಯ್ಯರ್ ʼವೇಶ್ಯೆಯರುʼ ಎಂದು ಕರೆದಿದ್ದಾರೆ ಮತ್ತು ನ್ಯೂಸ್ ಲಾಂಡ್ರಿಯನ್ನುʼವೇಶ್ಯಾಗೃಹʼ ಎಂದು ಕರೆದಿದ್ದಾರೆ ಎಂದು ಆರೋಪಿಸಿ ಲಿಖಿತ ಕ್ಷಮೆಯಾಚನೆ ಮತ್ತು 2 ಕೋಟಿ ರೂ. ಪರಿಹಾರವನ್ನು ದೂರುದಾರರು ಕೋರಿದ್ದಾರೆ ಎಂದು ಪತ್ರಕರ್ತರು ಸಲ್ಲಿಸಿದ್ದ ಸಿವಿಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಏಕಸದಸ್ಯ ಪೀಠ ಗಮನಿಸಿದೆ.
ʼಈ ರೀತಿಯ ಭಾಷೆಗಳು, ಹಿನ್ನೆಲೆ ಏನೇ ಇರಲಿ, ಸಮಾಜದಲ್ಲಿ ಮಹಿಳೆಯರ ವಿರುದ್ಧ ಈ ರೀತಿಯ ಭಾಷೆ ಬಳಕೆಯನ್ನು ಅನುಮತಿಸಬಹುದೇ? ನಾವು ಪ್ರತಿವಾದಿಯ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ನಿರ್ದೇಶಿಸಬಹುದುʼ ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆಯ ವೇಳೆ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕದಿರುವ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿದೆ.
ಅಯ್ಯರ್ ಅವರ ಪರವಾಗಿ ವಕೀಲ ಜೈ ಅನಂತ್ ದೇಹಾದ್ರಾಯಿ ವಾದವನ್ನು ಮಂಡಿಸಿದರು. ಐದು ಗಂಟೆಗಳ ಒಳಗೆ ವಿವಾದಿತ ಪೋಸ್ಟ್ ತೆಗೆದು ಹಾಕುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.







