ತಾಂತ್ರಿಕ ಸಮಸ್ಯೆ: ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಕೊಚ್ಚಿಗೆ ವಾಪಸ್

ಇಂಡಿಗೊ ವಿಮಾನ | PC : PTI
ಕೊಚ್ಚಿ: ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ, ಎರಡು ಗಂಟೆಗಳ ಕಾಲ ಹಾರಾಟ ನಡೆಸಿದ್ದ ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಮತ್ತೆ ಕೊಚ್ಚಿಗೆ ವಾಪಸ್ಸಾಗಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.
ವಿಮಾನದಲ್ಲಿ 180ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಆರು ಮಂದಿ ವಿಮಾನ ಸಿಬ್ಬಂದಿಗಳಿದ್ದರು ಎಂದು ಹೇಳಲಾಗಿದೆ. ಈ ಕುರಿತು ಇಂಡಿಗೊ ವಿಮಾನ ಯಾನ ಸಂಸ್ಥೆ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶುಕ್ರವಾರ ರಾತ್ರಿ 11.10 ಗಂಟೆಗೆ ನಿರ್ಗಮಿಸಿದ್ದ ವಿಮಾನ ಸಂಖ್ಯೆ 6ಇ-1403 (ಸಿಒಕೆ-ಅಯುಎಚ್), ಶನಿವಾರ ಮುಂಜಾನೆ ಸುಮಾರು 1.44 ಗಂಟೆಗೆ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಕೊಚ್ಚಿಗೆ ಮರಳಿತು ಎಂದು ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶನಿವಾರ ಮುಂಜಾನೆ ಸುಮಾರು 3.30ರ ವೇಳೆಗೆ ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಅಬು ಧಾಬಿಗೆ ರವಾನಿಸಲಾಯಿತು. ವಿಮಾನ ಕರ್ತವ್ಯದ ಅವಧಿ ನಿರ್ಬಂಧದ ಕಾರಣಕ್ಕೆ ವಿಮಾನದ ಕಾರ್ಯಾಚರಣೆಯನ್ನು ಬೇರೊಂದು ಸಿಬ್ಬಂದಿಗಳ ತಂಡ ನಿರ್ವಹಿಸಿತು.





