ತಮಿಳುನಾಡು: ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ; ಅಕ್ರಮ ಗ್ಯಾಸ್ ಸ್ಟವ್, ಕಲ್ಲಿದ್ದಲು, ಕಟ್ಟಿಗೆ ಪತ್ತೆ

Photo: twitter.com/Harshpatel
ಮಧುರೈ: ಶನಿವಾರ ನಸುಕಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದ ರೈಲಿನ ಖಾಸಗಿ ಬೋಗಿಯಲ್ಲಿ ಅಡುಗೆ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಮತ್ತು ಸ್ಟವ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶದಿಂದ ಬರುತ್ತಿದ್ದ ಯಾತ್ರಾರ್ಥಿಗಳ ಪೈಕಿ ಒಂಬತ್ತು ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದು, ಅಡುಗೆ ಸಿಲಿಂಡರ್ನಿಂದ ಬೆಂಕಿ ಹತ್ತಿಕೊಂಡಿರಬೇಕು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ರೈಲು ಬೋಗಿಯಲ್ಲಿ ಗ್ಯಾಸ್ ಸ್ಟವ್ ಬಳಸುತ್ತಿದ್ದುದು ದೃಢಪಟ್ಟಿದೆ. ಕಲ್ಲಿದ್ದಲು ಮತ್ತು ಕಟ್ಟಿಗೆ ಕೂಡಾ ಕೋಚ್ನಲ್ಲಿ ಪತ್ತೆಯಾಗಿದೆ. ರೈಲುಬೋಗಿಯ ಒಂದು ತುದಿಯಲ್ಲಿ ಶೌಚಾಲಯ ಬಳಿ ಅಡುಗೆ ಮಾಡಿರುವುದು ಮತ್ತು ದಾಸ್ತಾನು ಮಾಡಿರುವುದು ಕೂಡಾ ಖಚಿತವಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಎಡಿಜಿಪಿ ವಿ.ವನಿತಾ ಬಹಿರಂಗಪಡಿಸಿದ್ದಾರೆ.
ಲಕ್ನೋ ನಿಲ್ದಾಣದಿಂದ ರೈಲು ಹೊರಟ ಬಳಿಕ ಅಡುಗೆ ಸಿಲಿಂಡರನ್ನು ಅಕ್ರಮವಾಗಿ ತರಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಟೂರ್ ಆಪರೇಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲಕ್ನೋ ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉತ್ತರ ಪ್ರದೇಶದ ಸೀತಾಪುರ ಭಾಸಿನ್ ಟ್ರಾವೆಲ್ಸ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್.ಸಿಂಗ್ ವಿವರಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಸುಟ್ಟಗಾಯಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ಸೀತಾಪುರದ ಭಾಸಿನ್ ಟ್ರಾವೆಲ್ಸ್ ಎಂಬ ಟ್ರಾವೆಲ್ ಏಜೆನ್ಸಿ ಈ ಬೋಗಿಯನ್ನು ಐಆರ್ಸಿಟಿಸಿ ಮೂಲಕ ಕಾಯ್ದಿರಿಸಿತ್ತು.







