ಟಿಎಂಸಿಗೆ ಮತಚಲಾಯಿಸದವರ ವಿರುದ್ಧ ದೌರ್ಜನ್ಯವೆಸಗುತ್ತಿದ್ದ ಸಂದೇಶ್ಖಾಲಿ ಪ್ರಕರಣದ ಆರೋಪಿಗಳು : ಎನ್ಸಿಎಸ್ಟಿ ತನಿಖಾ ತಂಡದ ಆರೋಪ

Photo: PTI
ಹೊಸದಿಲ್ಲಿ: ಪಶ್ಚಿಮಬಂಗಾಳದ ಸಂದೇಶ್ಖಾಲಿಯಲ್ಲಿ ಭೂಗಳ್ಳತನ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕ ಶೇಖ್ ಶಾಜಹಾನ್ ಹಾಗೂ ಆತನ ಸಹಚರರು ಬಡ ಬುಡಕಟ್ಟು ಕುಟುಂಬಗಳಿಂದ ಬಲವಂತವಾಗಿ ಎಂನರೇಗಾ ವೇತನದ ಹಣವನ್ನು ಕಸಿದುಕೊಳ್ಳುತ್ತಿದ್ದರು ಹಾಗೂ ತಮ್ಮ ಪಕ್ಷದ ವಿರುದ್ದ ಮತ ಚಲಾಸಿದವರ ವಿರುದ್ಧ ದಬ್ಬಾಳಿಕೆ ನಡೆಸುತ್ತಿದ್ದರು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ (NCST)ದ ತನಿಖಾ ತಂಡವು ಆಪಾದಿಸಿದೆ.
ಪಶ್ಚಿಮಬಂಗಾಳದ ಪೊಲೀಸರು ಶಾಜಹಾನ್ ಹಾಗೂ ಆತನ ಸಹಚರರಿಗೆ ರಕ್ಷಣೆ ನೀಡುತ್ತಿದ್ದರೆಂದು ಸಂದೇಶ್ಖಾಲಿಗೆ ಭೇಟಿ ನೀಡಿದ ಎನ್ಸಿಎಸ್ಟಿಯ ಉಪಾಧ್ಯಕ್ಷ ಆನಂತ ನಾಯಕ್ ನೇತೃತ್ವದ ತ್ರಿಸದಸ್ಯ ತಂಡಕ್ಕೆ ದೂರುದಾರರು ತಿಳಿಸಿದ್ದಾರೆ.
ತನಿಖಾ ತಂಡವು ದಿಲ್ಲಿಗೆ ಹಿಂತಿರುಗಿದ್ದು, ವರದಿಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಆನಂತರ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಆನಂತರ ನಾಯಕ್ ತಿಳಿಸಿದ್ದಾರೆ.
ಸಂದೇಶ್ಖಾಲಿಯಲ್ಲಿ ಶಾಜಹಾನ್ ಹಾಗೂ ಆತನ ಸಹಚರರು ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ 50ಕ್ಕೂ ಅಧಿಕ ದೂರುಗಳನ್ನು ಸಮಿತಿಯು ಸ್ವೀಕರಿಸಿತು. ಸಂದೇಶ್ಖಾಲಿಯಲ್ಲಿ ಬುಡಕಟ್ಟು ಹಾಗೂ ಬುಡಕಟ್ಟುಯೇತರ ಜನರಿಂದ ಶಾಜಹಾನ್ ಸಾವಿರಾರು ಎಕರೆ ಜಮೀನನ್ನು ಕಸಿದುಕೊಂಡಿದ್ದಾನೆಂದು ಅವರು ಆಪಾದಿಸಿದ್ದಾರೆ.
“ಎಂನರೇಗಾ ಯೋಜನೆಯಡಿ ದುಡಿದು ಸಂಪಾದಿಸಿದ ಹಣವನ್ನು ತನಗೆ ನೀಡುವಂತೆ ಶಾಜಹಾನ್ ಬಡಬುಡಕಟ್ಟು ಜನರನ್ನು ಬಲವಂತಪಡಿಸುತ್ತಿದ್ದ. ಈಗಾಗಲೇ ಆ ಹಣವು ಖಾಲಿಯಾಗಿದೆಯೆಂದು ಬುಡಕಟ್ಟು ಜನರು ಹೇಳಿದಲ್ಲಿ, ಸಾಲ ಮಾಡಿ, ತನಗೆ ಹಣ ನೀಡುವಂತೆ ಕೇಳುತ್ತಿದ್ದ’’ ಎಂದು ನಾಯಕ್ ತಿಳಿಸಿದ್ದಾರೆ.
ಒಂದು ವೇಳೆ ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಲ್ಲಿ, ಪೊಲೀಸರು ಎಫ್ಐಆರ್ ದಾಖಲಿಸುತ್ತಿರಲಿಲ್ಲ. ಬದಲಿಗೆ ಶಾಜಹಾನ್ ಜೊತೆ ಸಂಧಾನವೇರ್ಪಡಿಸುವಂತೆ ಸಲಹೆ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸಂದೇಶ ಖಾಲಿಯಲ್ಲಿ ಕಳೆದ ತಿಂಗಳು ಶಾಜಹಾನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದಾಗ, ಅವರ ಮೇಲೆ ಟಿಎಂಸಿ ಕಾರ್ಯಕರ್ತರು ಹಾಗೂ ಬೆಂಬಲಿಗರು ದಾಳಿ ನಡೆಸಿದ್ದರು. ಆಗ ಭುಗಿಲೆದ್ದ ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದದರು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಘಟನೆಗಳು ನಡೆದಿದ್ದವು.
ಹಿಂಸಾಚಾರದ ಘಟನೆಯ ಬಳಿಕ ಸಂದೇಶ್ಖಾಲಿ ಬೂದಿಮುಚ್ಚಿದ ಕೆಂಡದಂತಿದ್ದು, ಪ್ರಕರಣದ ಮುಖ್ಯ ಆರೋಪಿ ಶಾಜಹಾನ್ ತಲೆಮರೆಸಿಕೊಂಡಿದ್ದಾನೆ.







