ಪತ್ನಿಯೊಂದಿಗೆ ಅಸಭ್ಯ ವರ್ತನೆ ಆರೋಪ: ಪತಿಯಿಂದ ಹಲ್ಲೆಗೊಳಗಾದ ಯುವಕ ರೈಲ್ವೇ ಹಳಿಗೆ ಬಿದ್ದು ಸಾವು

ಮುಂಬೈ: ಮುಂಬೈ ರೈಲು ನಿಲ್ದಾಣದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯ ಪತಿ ಮಾಡಿರುವ ಹಲ್ಲೆಯಿಂದ ಯುವಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ.
ಮುಂಬೈನ ಸಿಯಾನ್ ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ನಲ್ಲಿ ಘಟನೆ ನಡೆದಿದ್ದು, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂದು ಆರೋಪಿಸಿ ಶೀತಲ್ ಮಾನೆ ಎಂಬಾಕೆ ದಿನೇಶ್ ರಾಥೋಡ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಮಹಿಳೆಯ ಪತಿಯೂ ಏಕಾಏಕಿ ಬಂದು ದಿನೇಶ್ ಮುಖಕ್ಕೆ ಬಲವಾದ ಏಟು ನೀಡಿದ್ದು, ಈ ಏಟಿಗೆ ತನ್ನ ನಿಯಂತ್ರಣ ತಪ್ಪಿದ ದಿನೇಶ್ ರೈಲ್ವೇ ಹಳಿಯ ಮೇಲೆ ಬಿದ್ದಿದ್ದಾರೆ.
ದಿನೇಶ್ ರಾಥೋಡ್ ಹಳಿಯಿಂದ ಮೇಲೆ ಏಳುವ ಮುನ್ನವೇ ರೈಲು ಅವರ ಮೇಲೆ ಹರಿದಿದೆ.
ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ರೈಲನ್ನು ನಿಲ್ಲಿಸಲು ಪ್ಲ್ಯಾಟ್‌ಫಾರ್ಮ್ ನಲ್ಲಿದ್ದವರು ಸೂಚಿಸಿದರಾದರೂ ರೈಲು ಅದಾಗಲೇ ಸಮೀಪಕ್ಕೆ ತಲುಪಿತ್ತು.
ಆರೋಪಿ ದಂಪತಿಯನ್ನು ಅವಿನಾಶ್ ಮಾನೆ ಮತ್ತು ಆತನ ಪತ್ನಿ ಶೀತಲ್ ಮಾನೆ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದೆ.
Next Story







