Punjab | 560 ದಿನಗಳ ದೀರ್ಘ ಹೋರಾಟಕ್ಕೆ ತೆರೆ; ಪಟಿಯಾಲಾದ BSNL ಟವರ್ನಿಂದ ಕೆಳಗಿಳಿದ ಗುರ್ಜೀತ್ ಸಿಂಗ್ ಖಾಲ್ಸಾ

Photo Credit: PTI
ಪಟಿಯಾಲಾ: ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ಅವಮಾನ ಪ್ರಕರಣಗಳಿಗೆ ಕಠಿಣ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ 560 ದಿನಗಳ ಕಾಲ BSNL ಗೋಪುರದ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತ ಗುರ್ಜೀತ್ ಸಿಂಗ್ ಖಾಲ್ಸಾ ಅವರನ್ನು ಶುಕ್ರವಾರ ಬೆಳಿಗ್ಗೆ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಸುಮಾರು 400 ಅಡಿ ಎತ್ತರದ ಗೋಪುರದ ಮೇಲೆ ದೀರ್ಘಕಾಲ ಉಳಿದಿದ್ದ ಖಾಲ್ಸಾ (43), ಪಟಿಯಾಲ ಜಿಲ್ಲೆಯ ಖೇರಿ ನಾಗಾಯನ್ ಗ್ರಾಮದವರು. ಪವಿತ್ರ ಗ್ರಂಥದ ಅವಮಾನಕ್ಕೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸುವುದು ಅವರ ಪ್ರಮುಖ ಬೇಡಿಕೆಯಾಗಿತ್ತು.
ಇತ್ತೀಚೆಗೆ ಪಂಜಾಬ್ ಸರ್ಕಾರ “ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕರ್ (ತಿದ್ದುಪಡಿ) ಕಾಯ್ದೆ, 2026” ಪ್ರಕಟಿಸಿದ್ದು, ಈ ಕಾಯ್ದೆಯಡಿ ಅವಮಾನಕ್ಕೆ ಜೀವಾವಧಿ ಶಿಕ್ಷೆ ಹಾಗೂ 25 ಲಕ್ಷ ರೂ.ವರೆಗೆ ದಂಡ ವಿಧಿಸುವ ಪ್ರಸ್ತಾಪವಿದೆ. ಈ ಹಿನ್ನೆಲೆಯಲ್ಲಿ ಖಾಲ್ಸಾ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು.
ಶುಕ್ರವಾರ ಬೆಳಿಗ್ಗೆ ‘ಜೋ ಬೋಲೆ ಸೋ ನಿಹಾಲ್, ಸತ್ ಶ್ರೀ ಅಕಾಲ್’ ಘೋಷಣೆಗಳ ನಡುವೆ ಜಿಲ್ಲಾಡಳಿತ, ಸೇನೆ ಹಾಗೂ ಅಗ್ನಿಶಾಮಕ ದಳದ ಸಹಾಯದಿಂದ ಅವರನ್ನು ಕೆಳಗಿಳಿಸಲಾಯಿತು. ನಂತರ ವೈದ್ಯಕೀಯ ತಪಾಸಣೆಗಾಗಿ ಅವರನ್ನು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಬೆಂಬಲಿಗರು ಹೂವಿನ ದಳಗಳನ್ನು ಸುರಿದು ಸ್ವಾಗತಿಸಿದರು.
ಈ ಕಾರ್ಯಾಚರಣೆಗೆ ಮುನ್ನ ಗುರುವಾರ ಸೇನೆ ಹಾಗೂ ಅಗ್ನಿಶಾಮಕ ದಳವು ಕವಾಯತು ನಡೆಸಿತ್ತು. ಎ. 13ರಂದು ನಡೆದ ವಿಶೇಷ ಅಧಿವೇಶನದಲ್ಲಿ ಪಂಜಾಬ್ ವಿಧಾನಸಭೆಯು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ.
ಕಠಿಣ ಚಳಿಗಾಲ ಮತ್ತು ತೀವ್ರ ಬೇಸಿಗೆಯ ನಡುವೆಯೂ ಗೋಪುರದ ಮೇಲೆ ಉಳಿದುಕೊಂಡಿದ್ದ ಖಾಲ್ಸಾ ಅವರ ಪ್ರತಿಭಟನೆ ಪಂಜಾಬ್ ನಾದ್ಯಂತ ಗಮನ ಸೆಳೆದಿತ್ತು. ಅವರಿಗೆ ಅಗತ್ಯ ವಸ್ತುಗಳನ್ನು ಹಗ್ಗಗಳ ಮೂಲಕ ಮೇಲಕ್ಕೆ ಕಳುಹಿಸಲಾಗುತ್ತಿತ್ತು.






