ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷೆಯಾಗಿ ಶ್ವೇತಾ ಮೆನನ್, ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕು ಪರಮೇಶ್ವರನ್ ಆಯ್ಕೆ

Photo | NDTV
ಕೊಚ್ಚಿ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ದ ಅಧ್ಯಕ್ಷೆಯಾಗಿ ಶ್ವೇತಾ ಮೆನನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕು ಪರಮೇಶ್ವರನ್ ಅವರು ಆಯ್ಕೆಯಾಗಿದ್ದಾರೆ.
ಸಂಘದ ಮೂರು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕಲಾವಿದರಿಬ್ಬರು ಸಂಘದ ಪ್ರಮುಖ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈವರೆಗೆ ಮಹಿಳಾ ಸದಸ್ಯರು ಉಪಾಧ್ಯಕ್ಷೆ, ಜಂಟಿ ಕಾರ್ಯದರ್ಶಿ ಅಥವಾ ಸಮಿತಿ ಸದಸ್ಯರಂತಹ ಸ್ಥಾನಗಳನ್ನು ಪಡೆದಿದ್ದರು.
ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ಶ್ವೇತಾ ಮೆನನ್ ಅವರು ನಟ, ಬಿಜೆಪಿ ನಾಯಕ ದೇವನ್ ಅವರನ್ನು ಸೋಲಿಸಿದರು. ಪರಮೇಶ್ವರನ್ ಅವರು ಪ್ರತಿಸ್ಪರ್ಧಿ ರವೀಂದ್ರನ್ ವಿರುದ್ಧ ಗೆಲುವನ್ನು ಸಾಧಿಸಿದ್ದಾರೆ.
ಹೊಸ ಪದಾಧಿಕಾರಿಗಳಲ್ಲಿ ಉಪಾಧ್ಯಕ್ಷರಾಗಿ ಜಯನ್ ಚೆರ್ತಲ ಮತ್ತು ಲಕ್ಷ್ಮಿ ಪ್ರಿಯಾ, ಖಜಾಂಚಿಯಾಗಿ ಉನ್ನಿ ಶಿವಪಾಲ್ ಮತ್ತು ಜಂಟಿ ಕಾರ್ಯದರ್ಶಿಯಾಗಿ ಅಂಝೀಬಾ ಹಸನ್ ಆಯ್ಕೆಯಾಗಿದ್ದಾರೆ.
ಶರಾಯು, ಅಂಜಲಿ ನಾಯರ್, ಆಶಾ ಅರವಿಂದ್, ಸಜಿತಾ, ನೀನಾ ಕುರುಪ್, ಜಾಯ್ ಮ್ಯಾಥ್ಯೂ, ಕೈಲಾಸ್, ನಂದು, ಡಾ. ರೋನಿ, ಸಿಜೋಯ್, ವಿನು, ಟಿನಿ ಟಾಮ್ ಮತ್ತು ಸಂತೋಷ್ ಸಮಿತಿಗೆ ಆಯ್ಕೆಯಾದರು.





