ಟ್ಯೂಶನ್ ಗೆ ಹೋಗುವ ವಿಚಾರದಲ್ಲಿ ಜಗಳ; ನಟಿಯ ಮಗ 49ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಮುಂಬೈ: ಜನಪ್ರಿಯ ಹಿಂದಿ ಮತ್ತು ಗುಜರಾತಿ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿರುವ ಮುಂಬೈ ನಟಿಯೊಬ್ಬರ 14 ವರ್ಷದ ಮಗ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಟ್ಯೂಶನ್ ತರಗತಿಗಳಿಗೆ ಹಾಜರಾಗುವ ವಿಷಯದಲ್ಲಿ ತಾಯಿಯೊಂದಿಗೆ ಜಗಳವಾಡಿದ ಬಳಿಕ ಬಾಲಕನು ಈ ಹತಾಶ ಕೃತ್ಯಕ್ಕೆ ಮುಂದಾದರು ಎನ್ನಲಾಗಿದೆ.
ಕುಟುಂಬವು ಕಾಂಡಿವಲಿಯಲ್ಲಿರುವ ಬ್ರೂಕ್ ಕಟ್ಟಡದ 51ನೇ ಮಹಡಿಯಲ್ಲಿ ವಾಸಿಸುತ್ತಿದೆ. ಬಾಲಕನು ಬುಧವಾರ ಎರಡು ಮಹಡಿ ಕೆಳಗಿಳಿದ ಬಳಿಕ ಕಟ್ಟಡದಿಂದ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಟ್ಯೂಶನ್ ಗೆ ಹೋಗುವಂತೆ ಸಂಜೆ 7 ಗಂಟೆ ಸುಮಾರಿಗೆ ಮಗನಿಗೆ ಹೇಳಿದೆ, ಆದರೆ ಆತನಿಗೆ ಇಷ್ಟವಿರಲಿಲ್ಲ ಎಂದು ಬಾಲಕನ ತಾಯಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಲವು ಬಾರಿ ಹೇಳಿದ ಬಳಿಕ, ಬಾಲಕನು ಮನೆಯಿಂದ ಹೊರಟನು.
ಕೆಲವು ನಿಮಿಷಗಳ ಬಳಿಕ, ಕಟ್ಟಡದ ಕಾವಲುಗಾರ ಮನೆಗೆ ಬಂದು ಬಾಲಕನು ಕಟ್ಟಡದಿಂದ ಕೆಳಗೆ ಬಿದ್ದಿರುವ ಸಂಗತಿಯನ್ನು ತಾಯಿಗೆ ತಿಳಿಸಿದರು. ತಾಯಿ ಸ್ಥಳಕ್ಕೆ ಧಾವಿಸಿದಾಗ ಮಗನ ರಕ್ತದಿಂದ ಆವರಿಸಿದ ಮಗನ ದೇಹ ನಿಶ್ಚಲವಾಗಿತ್ತು ಎಂದು ಪೊಲೀಸರು ತಿಳಿಸಿದರು.
ವಿವರವಾದ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.







