ಆದಿತ್ಯ ಎಲ್-1: ಭೂಬಂಧಿತ 3ನೇ ಕಾರ್ಯಾಚರಣೆ ಯಶಸ್ವಿ

ಆದಿತ್ಯ-ಎಲ್1 | Photo: Twitter \ @isro
ಬೆಂಗಳೂರು: ಇಸ್ರೋದ ಟೆಲೆಮೆಟ್ರಿ, ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ವರ್ಕ್ (ಇಸ್ಟ್ರ್ಯಾಕ್) ಭಾನುವಾರ ನಸುಕಿನ ವೇಳೆ ಭಾರತದ ಮೊಟ್ಟಮೊದಲ ಸೌರ ಬಾಹ್ಯಾಕಾಶ ವೀಕ್ಷಣಾ ಮಿಷನ್ ಆದಿತ್ಯ-ಎಲ್1ನ 3ನೇ ಭೂಬಂಧಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದೆ.
ನಸುಕಿನ 2.30 ರ ವೇಳೆಗೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಇಸ್ರೋ ಪ್ರಕಟಿಸಿದ್ದು, "ಮರೀಷಿಯಸ್, ಬೆಂಗಳೂರು, ಶ್ರೀಹರಿಕೋಟಾದ ಎಸ್ಡಿಎಸ್ಸಿ-ಎಸ್ಎಚ್ಎಆರ್ ಹಾಗೂ ಪೋರ್ಟ್ಬ್ಲೇರ್ ನ ಭೂಕೇಂದ್ರಗಳು ಈ ಕಾರ್ಯಾಚರಣೆ ವೇಳೆ ಉಪಗ್ರಹವನ್ನು ಟ್ರ್ಯಾಕ್ ಮಾಡಿವೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಆದಿತ್ಯ-ಎಲ್1 ಮಿಷನ್ ಸೆಪ್ಟೆಂಬರ್ 2ರಂದು ಉಡಾವಣೆಗೊಂಡಿತ್ತು.
ಈ ಉಪಗ್ರಹ ಇದೀಗ 296 ಕಿಲೋಮೀಟರ್ 71767 ಕಿಲೋಮೀಟರ್ ಕಕ್ಷೆಯಲ್ಲಿದ್ದು, ಸೆಪ್ಟೆಂಬರ್ 15ರಂದು ಮುಂಜಾನೆ 2 ಗಂಟೆಗೆ ಮುಂದಿನ ಭೂಬಂಧಿತ ಕಾರ್ಯಾಚರಣೆ ನಡೆಯಲಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 15ರ ಕಾರ್ಯಾಚರಣೆ ಸೇರಿದಂತೆ ಆದಿತ್ಯ ಎಲ್-1 ಇಂಥ ಎರಡು ಕಾರ್ಯಾಚರಣೆಗಳನ್ನು ಹೊಂದಿದ್ದು, ಎಲ್1 ತಾಣದತ್ತ ತನ್ನ ಪಯಣದ ಅಗತ್ಯ ವೇಗವರ್ಧನೆಯನ್ನು ಗಳಿಸಿಕೊಳ್ಳಲು ಇದು ಅಗತ್ಯವಾಗಿದೆ.
ಉಡಾವಣೆಯ 16 ದಿನಗಳಲ್ಲಿ ಭೂಬಂಧಿತ ಕಾರ್ಯಾಚರಣೆಗಳು ಪೂರ್ಣಗೊಂಡ ಬಳಿಕ ಆದಿತ್ಯ ಎಲ್-1 ಟಿಎಲ್1 ಕಾರ್ಯಾಚರಣೆಗೆ ಒಳಗಾಗಲಿದೆ. ಇದು ಎಲ್1ನ 110 ದಿನಗಳ ಪಥದ ಆರಂಭ ಎನಿಸಲಿದೆ.







