ಭಾರತೀಯ ಉದ್ಯಮಗಳಿಗೆ ಐದು ವರ್ಷ ತೆರಿಗೆ ವಿನಾಯಿತಿ ಘೋಷಿಸಿದ ಅಫ್ಘಾನಿಸ್ತಾನ

PC: x.com/the_hindu
ಹೊಸದಿಲ್ಲಿ: ಭಾರತದ ಜತೆಗಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಮುಂದುವರಿಸಿರುವ ಅಫ್ಘಾನಿಸ್ತಾನ, ಭಾರತೀಯ ಉದ್ಯಮಗಳಿಗೆ ಐದು ವರ್ಷಗಳ ತೆರಿಗೆ ವಿನಾಯ್ತಿ ಘೋಷಿಸಿದೆ. ಜತೆಗೆ ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳ ಮೇಲೆ ಕೇವಲ ಶೇಕಡ 1ರಷ್ಟು ಆಮದು ಸುಂಕ ವಿಧಿಸಲಾಗುವುದು ಎಂದು ವಾಣಿಜ್ಯ ಸಚಿವ ನೂರುದ್ದೀನ್ ಅಝೀಝಿ ಶುಕ್ರವಾರ ಪ್ರಕಟಿಸಿದ್ದಾರೆ.
ಹಲವು ವರ್ಷಗಳಿಂದ ಸಂಘರ್ಷದಲ್ಲಿ ಸಿಲುಕಿದ್ದ ದೇಶಕ್ಕೆ ಸಿಮೆಂಟ್, ಅಕ್ಕಿ, ಜವಳಿ, ಔಷಧ, ಗಣಿಗಾರಿಕೆ ಮತ್ತು ವಿದ್ಯುತ್ ಆದ್ಯತೆಯ ಕ್ಷೇತ್ರಗಳು ಎಂದು ಗುರುತಿಸಿದ್ದಾರೆ.
"ದೇಶಿ ಕೈಗಾರಿಕೆಗಳನ್ನು ಬೆಂಬಲಿಸಲು ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳ ಮೇಲೆ ಕೇವಲ ಶೇಕಡ 1ರಷ್ಟು ಆದ್ಯತಾ ಸುಂಕವನ್ನು ವಿಧಿಸಲಾಗುತ್ತದೆ ಹಾಗೂ ಅಫ್ಘಾನಿಸ್ತಾನದಲ್ಲಿ ಆರಂಭವಾಗುವ ಭಾರತೀಯ ಉದ್ಯಮಗಳಿಗೆ ಐದು ವರ್ಷಗಳ ಕಾಲ ತೆರಿಗೆ ವಿನಾಯ್ತಿ ನೀಡಲಗುತ್ತದೆ" ಎಂದು ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸಮಾರಂಭದಲ್ಲಿ ಹೇಳಿದರು.
ಅಫ್ಘಾನಿಸ್ತಾನವು ಸ್ಥಿತಿಸ್ಥಾಪಕತ್ವ ಹೊಂದಿದ ಮತ್ತು ಸಶಕ್ತ ವ್ಯಾಪಾರ ಪರಿಸರವನ್ನು ಕಲ್ಪಿಸಿಕೊಟ್ಟಿದೆ ಹಾಗೂ ಭಾರತೀಯ ಕಂಪನಿಗಳು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಎನ್ನುವುದು ನಮ್ಮ ಬಯಕೆ ಎಂದು ಸ್ಪಷ್ಟಪಡಿಸಿದರು. ಉತ್ಪಾದನಾ ಉತ್ತೇಜಕಗಳ ಬಗ್ಗೆ ಪ್ರಸ್ತಾಪಿಸಿದ ಅವರು, "ನಾವು ಆರ್ಥಿಕ ದೃಷ್ಟಿಕೋನದ ನೀತಿಗಳನ್ನು ಹೊಂದಿದ್ದೇವೆ. ಆದ್ದರಿಂದ ಉತ್ಪಾದನೆ ಶೇಕಡ 20ರಷ್ಟು ಹೆಚ್ಚಿಸಿದರೆ, ನಾವು ಸರ್ಕಾರಿ ಬೆಂಬಲವನ್ನು ಹೆಚ್ಚಿಸುತ್ತೇವೆ. ಉತ್ಪಾದನೆ ಹೆಚ್ಚಿದಂತೆಲ್ಲ ಸರ್ಕಾರದ ಉತ್ತೇಜನವೂ ಹೆಚ್ಚುತ್ತದೆ ಎಂದು ವಿವರಿಸಿದರು.







