26 ವರ್ಷ ಬಳಿಕ ಅತ್ಯಾಚಾರ ಆರೋಪಿಯ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್
Photo: freepik
ಲಕ್ನೋ: ಸುಮಾರು 26 ವರ್ಷ ಹಿಂದೆ ಅತ್ಯಾಚಾರ ಆರೋಪಿಯೊಬ್ಬನಿಗೆ ನೀಡಿದ್ದ ಶಿಕ್ಷೆಯನ್ನು ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್, ತಕ್ಷಣ ಆತನ ಬಿಡುಗಡೆಗೆ ಆದೇಶಿಸಿದೆ. ಅತ್ಯಾಚಾರ ಸಂತ್ರಸ್ತೆಯ ಸಾಕ್ಷ್ಯಗಳು "ಅಸ್ಥಿರ ಮತ್ತು ವಿಶ್ವಾಸಾರ್ಹವಲ್ಲ" ಎಂಬ ಕಾರಣಕ್ಕೆ ಆರೋಪಿಯ ಶಿಕ್ಷೆಯನ್ನು ರದ್ದುಪಡಿಸಲಾಗಿದೆ.
ನ್ಯಾಯಮೂರ್ತಿ ಕರುಣೇಶ್ ಸಿಂಗ್ ಪವಾರ್ ಅವರ ನೇತೃತ್ವದ ನ್ಯಾಯಪೀಠ, "ಈ ಪ್ರಕರಣದಲ್ಲಿ ಸಂತ್ರಸ್ತೆ ಒಪ್ಪಿಗೆ ನೀಡಿರುವ ಸಾಧ್ಯತೆಯಿದ್ದು, ಆಕೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹ" ಎಂದು ಅಭಿಪ್ರಾಯಪಟ್ಟಿದೆ.
ಘಟನೆ ನಡೆದ ಸಂದರ್ಭದಲ್ಲಿ ಆಕೆಗೆ 16 ವರ್ಷ ವಯಸ್ಸಾಗಿತ್ತು ಎಂಬ ವೈದ್ಯಕೀಯ ವರದಿಯಾಚೆಗೆ ಆಕೆಯ ವಯಸ್ಸಿಗೆ ಸಂಬಂಧಿಸಿದಂತೆ ಪುರಾವೆಗಳು ಇಲ್ಲ. ಭಾರತೀಯ ದಂಡಸಂಹಿತೆಯ ಸೆಕ್ಷನ್ 1997ರಲ್ಲಿ ತಿದ್ದುಪಡಿಯಾಗಿದ್ದು, ಅದಕ್ಕೂ ಮುನ್ನ ಈ ಪ್ರಕರಣ ನಡೆದಿತ್ತು. ಆಗ ಲೈಂಗಿಕ ಚಟುವಟಿಕೆಗೆ ಸಮ್ಮತಿ ನೀಡುವ ವಯಸ್ಸು 16 ಆಗಿತ್ತು ಎಂದು ನ್ಯಾಯಮೂರ್ತಿ ಪವಾರ್ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣ 1997ರ ಜನವರಿ 16ರಂದು ನಡೆದಿದೆ ಎನ್ನಲಾಗಿದ್ದು, ಯುವತಿಯ ತಂದೆ ಈ ಸಂಬಂಧ ದೂರು ನೀಡಿ, ಆರೋಪಿ ಲಲ್ಲಾ ಎಂಬಾತ ಮಗಳನ್ನು ಅಪಹರಿಸಿದ್ದಾನೆ ಎಂದು ಹೇಳಿದ್ದರು. ಜನವರಿ 27ರಂದು ಯುವತಿ ಪತ್ತೆಯಾಗಿದ್ದು, ಆ ಬಳಿಕ ಲಲ್ಲಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗೆ ಶಿಕ್ಷೆ ವಿಧಿಸಿ ಭಾರತೀಯ ದಂಡಸಂಹಿತೆ ಸೆಕ್ಷನ್ 376ರ ಅಡಿಯಲ್ಲಿ ಸೆರೆಮನೆ ವಾಸ ವಿಧಿಸಲಾಗಿತ್ತು.