ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಹಳೆಯ ನಿಯಮಕ್ಕೆ ಮರಳಿದ ಚುನಾವಣಾ ಆಯೋಗ: ಅಂಚೆ ಮತಪತ್ರಗಳ ಬಳಿಕವೇ ಇವಿಎಂ ಎಣಿಕೆ

ಹೊಸದಿಲ್ಲಿ: ಅಂಚೆ ಮತಪತ್ರಗಳು ಮತ್ತು ಇವಿಎಂಗಳಲ್ಲಿ ಚಲಾಯಿಸಲಾದ ಮತಗಳ ಎಣಿಕೆಯನ್ನು ಪ್ರತ್ಯೇಕಿಸುವ ತನ್ನ 2019ರ ನಿರ್ಧಾರವನ್ನು ಕೈಬಿಟ್ಟಿರುವ ಚುನಾವಣಾ ಆಯೋಗವು ಎಲ್ಲ ಅಂಚೆ ಮತಪತ್ರಗಳ ಎಣಿಕೆಯ ಬಳಿಕವೇ ಇವಿಎಂ ಮತ ಎಣಿಕೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮತಎಣಿಕೆ ಪ್ರಕ್ರಿಯೆಯನ್ನು ಬದಲಿಸಲು ಗುರುವಾರ ನಿರ್ಧರಿಸಿದೆ ಎಂದು indianexpress.com ವರದಿ ಮಾಡಿದೆ.
ಎಣಿಕೆ ಕೇಂದ್ರಗಳಲ್ಲಿ ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಳ್ಳುವವರೆಗೂ ಇವಿಎಂ/ವಿವಿಪ್ಯಾಟ್‌ಗಳ ಎಣಿಕೆಯ ಉಪಾಂತ್ಯ ಸುತ್ತನ್ನು ಕೈಗೆತ್ತಿಕೊಳ್ಳಬಾರದು ಎಂದು ಚುನಾವಣಾ ಆಯೋಗವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಹೊರಡಿಸಿರುವ ಸೂಚನೆಗಳಲ್ಲಿ ತಿಳಿಸಿದೆ. ಎಣಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಅಂಚೆ ಮತಪತ್ರಗಳ ಎಣಿಕೆಯಲ್ಲಿ ಅಗತ್ಯ ಸ್ಪಷ್ಟತೆಯನ್ನು ಒದಗಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ಹೇಳಿದೆ.
ಸಂಸದೀಯ ಕ್ಷೇತ್ರದ ಮತಎಣಿಕೆ ಸಂದರ್ಭದಲ್ಲಿ ಹಲವಾರು ಎಣಿಕೆ ಕೇಂದ್ರಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಎಣಿಕೆ ನಡೆದರೆ ಅಂಚೆ ಮತಪತ್ರಗಳ ಎಣಿಕೆ ನಡೆಯುವವರೆಗೆ ಎಲ್ಲ ಎಣಿಕೆ ಕೇಂದ್ರಗಳಲ್ಲಿ ಇವಿಎಂ/ವಿವಿಪ್ಯಾಟ್ ಎಣಿಕೆಯ ಉಪಾಂತ್ಯ ಸುತ್ತನ್ನು ನಿಲ್ಲಿಸುವ ಅಗತ್ಯವಿಲ್ಲ. ಅಂಚೆ ಮತಪತ್ರಗಳ ಎಣಿಕೆ ಪ್ರಗತಿಯಲ್ಲಿರುವ ಕೇಂದ್ರಗಳಲ್ಲಿ ಮಾತ್ರ ಅದನ್ನು ನಿಲ್ಲಿಸಲಾಗುವುದು ಎಂದು ಆಯೋಗವು ವಿವರಿಸಿದೆ.
ರಾಜಕೀಯ ಪಕ್ಷಗಳ ಬೇಡಿಕೆಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಬದಲಾವಣೆಗಾಗಿ ಆಗ್ರಹಿಸುತ್ತಿದ್ದ ಪ್ರತಿಪಕ್ಷಗಳು ಕೊನೆಯ ಕ್ಷಣದಲ್ಲಿ ಅಂಚೆ ಮತಪತ್ರಗಳ ತಿರಸ್ಕರಣೆ ಅಥವಾ ಸಿಂಧುತ್ವವು ನಿಕಟ ಹಣಾಹಣಿಗೆ ಕಾರಣವಾಗಬಹುದು ಮತ್ತು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದವು.
2024ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ 2019ರ ನಿರ್ಧಾರವನ್ನು ಕೈಬಿಡುವಂತೆ ಮತ್ತು ಎಲ್ಲ ಅಂಚೆ ಮತಪತ್ರಗಳ ಎಣಿಗೆ ಪೂರ್ಣಗೊಳ್ಳುವವರೆಗೆ ಇವಿಎಂ ಎಣಿಕೆಯ ಉಪಾಂತ್ಯ ಸುತ್ತನ್ನು ತಡೆಹಿಡಿಯುವ ಹಳೆಯ ಪದ್ಧತಿಗೆ ಮರಳುವಂತೆ ಇಂಡಿಯಾ ಮೈತ್ರಿಕೂಟವು ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಆಯೋಗದ 2019ರ ನಿರ್ದೇಶನಗಳು 1961ರ ಚುನಾವಣಾ ನಿಯಮಾವಳಿಯ ನಿಯಮ 54ಎ ನಿಯಮಕ್ಕೆ ವಿರುದ್ಧವಾಗಿವೆ ಎಂದು ಅದು ವಾದಿಸಿತ್ತು. ಆದರೆ ಆಗಿನ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಈ ಬೇಡಿಕೆಯನ್ನು ತಿರಸ್ಕರಿಸಿದ್ದರು. ಚುನಾವಣೆ ನಡೆಯುತ್ತಿರುವಾಗ ಮಧ್ಯದಲ್ಲಿ ಪ್ರಕ್ರಿಯೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದರು.
2019ರವರೆಗೂ ಎಲ್ಲ ಅಂಚೆ ಮತಪತ್ರಗಳ ಎಣಿಕೆಯ ಬಳಿಕವೇ ಇವಿಎಂ ಮತ ಎಣಿಕೆಯ ಉಪಾಂತ್ಯ ಸುತ್ತನ್ನು ಕೈಗೆತ್ತಿಕೊಳ್ಳುವ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಅನುಸರಿಸುತ್ತಿತ್ತು. ಮೇ 18,2019ರಂದು ಚುನಾವಣಾ ಆಯೋಗವು ಅಂಚೆ ಮತಪತ್ರಗಳ ಸಂಖ್ಯೆಯಲ್ಲಿ ಏರಿಕೆಯನ್ನು ಉಲ್ಲೇಖಿಸಿ ಮತ ಎಣಿಕೆ ಕಾರ್ಯವಿಧಾನವನ್ನು ಬದಲಿಸಿತ್ತು.







