ಬಿಹಾರ ಸೋಲು | ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಕುತ್ತು?

PC | hindustantimes
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ತೀವ್ರ ಮುಖಭಂಗ ಅನುಭವಿಸಿದ್ದು, ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಸ್ಥಾನಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇದು ದೇಶದ ವಿರೋಧ ಪಕ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಇಂಡಿಯಾ ಮೈತ್ರಿಕೂಟದಲ್ಲಿ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ಇದ್ದು, ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಕುತ್ತು ತರುವ ಸಾಧ್ಯತೆ ಇದೆ.
ಬಿಹಾರದಲ್ಲಿ ಸ್ಪರ್ಧಿಸಿದ್ದ 61 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಗೆದ್ದಿದ್ದು, ಗೆಲುವಿನ ದರ ಶೇಕಡ 9.8ರಷ್ಟಾಗಿದೆ.
"ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ತಡೆಯಲಾಗದು ಎನ್ನುವುದು ಸ್ಪಷ್ಟ. ಬಿಜೆಪಿಯನ್ನು ಸೋಲಿಸುವ ಸಾಮಥ್ರ್ಯದ ಇತಿಹಾಸ ಇರುವ ಪಕ್ಷಕ್ಕೆ ನಾಯಕತ್ವದ ಸ್ಥಾನ ಲಭ್ಯವಾಗಬೇಕು. ಕೇವಲ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಾತ್ರ ಬಿಜೆಪಿಯನ್ನು ಸೋಲಿಸಿದ ದಾಖಲೆ ಹೊಂದಿದ್ದಾರೆ. ಮಮತಾ ಬ್ಯಾನರ್ಜಿಯವರು ವಿರೋಧ ಪಕ್ಷಗಳ ಕೂಟವನ್ನು ಮುನ್ನಡೆಸುವ ಸಮಯ ಬಂದಿದೆ" ಎಂದು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೂರು ವಿಧಾನಸಭಾ ಚುನಾವಣೆ ಹಾಗೂ ಮೂರು ಲೋಕಸಭಾ ಚುನಾವಣೆ ಹೀಗೆ ಆರು ಸ್ಥಾನಗಳಲ್ಲಿ ಸತತವಾಗಿ ಬಿಜೆಪಿ ವಿರುದ್ಧ ಗೆಲುವಿನ ದಾಖಲೆಯನ್ನು ಟಿಎಂಸಿ ನಾಯಕಿ ಹೊಂದಿದ್ದಾರೆ ಎಂದು ಮತ್ತೊಬ್ಬರು ಹಿರಿಯ ಟಿಎಂಸಿ ನಾಯಕರು ಬಣ್ಣಿಸಿದ್ದಾರೆ.
ಕೆಲ ತಿಂಗಳಿನಿಂದ ಟಿಎಂಸಿ, ಎಎಪಿ, ಶಿವಸೇನೆ (ಯುಬಿಟಿ) ಮತ್ತು ಸಮಾಜವಾದಿ ಪಕ್ಷಗಳು ತಮ್ಮದೇ ಯೋಜನೆಯನ್ನು ರೂಪಿಸುತ್ತಿದ್ದು, ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಿವೆ ಹಾಗೂ 99 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಹಾದಿಯಲ್ಲಿ ಮುನ್ನಡೆಯುವ ಬದಲು ತಮ್ಮದೇ ಗುರಿಯ ಬಗ್ಗೆ ಗಮನ ಹರಿಸಿವೆ. ಈ ಪಕ್ಷಗಳು ಒಟ್ಟು 77 ಸ್ಥಾನಗಳನ್ನು ಹೊಂದಿದ್ದು, ಸಾಕಷ್ಟು ಪ್ರಭಾವಿ ಗುಂಪಾಗಿ ರೂಪುಗೊಂಡಿದೆ.
ಈ ಪರಿವರ್ತನೆಯ ಸುಳಿವನ್ನು 2024ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನೋಡಿದ್ದು, ಕಾಂಗ್ರೆಸ್ ಬದಲಾಗಿ ಆಮ್ ಆದ್ಮಿ ಪಾರ್ಟಿಯನ್ನು ಈ ಪಕ್ಷಗಳು ಬೆಂಬಲಿಸಿದ್ದವು.
ಬಿಹಾರದ ಮಹಾಪತನ ಮುಂದಿನ ವರ್ಷ ಚುನಾವಣೆ ನಡೆಯುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಹಾಗೂ ಕೇರಳ ಮತ್ತು ಆ ಬಳಿಕ ಚುನಾವಣೆ ನಡೆಯುವ ಗೋವಾ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗೆ ಮುನ್ನ ಸಂಭವಿಸಿರುವುದು ವಿರೋಧ ಪಕ್ಷಗಳ ಪಾಲಿಗೆ ನಿಜವಾದ ಅಗ್ನಿಪರೀಕ್ಷೆ ಎನಿಸಿದೆ. ಏತನ್ಮಧ್ಯೆ ಸಿಪಿಐಎಂ ಮುಖ್ಯಸ್ಥ ಎಂ.ಎ.ಬೇಬಿ ಅವರು, ಪಕ್ಷದ ನೆಲೆಯಲ್ಲಿ ಮತ್ತು ಗುಂಪಿನ ನೆಲೆಯಲ್ಲಿ ಆತ್ಮಾವಲೋಕನದ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.







