ಶಿವರಾಜ್ ಸಿಂಗ್ ಚೌಹಾಣ್ ಗೆ ಕೃಷಿ ಖಾತೆ | ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ

ಶಿವರಾಜ್ ಸಿಂಗ್ ಚೌಹಾಣ್ | PC: PTI
ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ನೂತನ ಸರಕಾರದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ನೀಡಿರುವುದನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ (SKM) ಸಂಘಟನೆ ಬುಧವಾರ ಪ್ರತಿಭಟನೆ ನಡೆಸಿತು.
2017ರಲ್ಲಿ ಮಧ್ಯಪ್ರದೇಶ ಮಂದ್ಸೌರ್ನಲ್ಲಿ 6 ರೈತರ ಸಾವಿಗೆ ಕಾರಣವಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಆ ಖಾತೆಯಿಂದ ಮುಕ್ತಗೊಳಿಸುವಂತೆ ಅವರು ಆಗ್ರಹಿಸಿದರು.
ರೈತರ ಆತ್ಮಹತ್ಯೆಗೆ ಪರಿಹಾರ, ಸ್ವಾಮಿನಾಥನ್ ಆಯೋಗದ ವರದಿಯ ಅನ್ವಯ ಕನಿಷ್ಠ ಬೆಂಬಲ ಬೆಲೆ, ಸಮಗ್ರ ಸಾಲ ಮನ್ನಾ ಆಗ್ರಹಿಸಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರನ್ನು ಹತ್ಯೆಗೈಯಲಾಗಿತ್ತು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ಆರೋಪಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾದ ಸಾಮಾನ್ಯ ಸಭೆ ಜುಲೈ 10ರಂದು ದಿಲ್ಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ದೇಶದ ರೈತ ಸಂಘಟನೆಗಳ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅದು ತಿಳಿಸಿದೆ.
ಮಧ್ಯಪ್ರದೇಶದ ಮಂದ್ಸೌರ್ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಹಾಗೂ ಪೊಲೀಸರು ರೈತರ ಗುಂಪಿನ ಮೇಲೆ ಹಾರಿಸಿದ ಗುಂಡಿನಿಂದ 6 ಮಂದಿ ರೈತರು ಸಾವನ್ನಪ್ಪಿದ್ದರು.





