Ahmedabad | 'ಮಲಾಲಾ, ಆ್ಯನ್ ಫ್ರಾಂಕ್ ಪುಸ್ತಕಗಳ ಓದು' ಪ್ರತಿಭಟನೆಗೆ VHP ಸದಸ್ಯರಿಂದ ಅಡ್ಡಿ; ಹಲ್ಲೆ ಆರೋಪ, ಮೂವರ ಬಂಧನ

Photo: x.com/PC70001010
ಅಹಮದಾಬಾದ್: ಮಲಾಲಾ ಯೂಸುಫ್ ಝಾಯ್ ಅವರ ಆತ್ಮಚರಿತ್ರೆ ‘ಐ ಆ್ಯಮ್ ಮಲಾಲಾ’ ಮತ್ತು ಹತ್ಯಾಕಾಂಡದಿಂದ ಬದುಕುಳಿದ ಆ್ಯನ್ ಫ್ರಾಂಕ್ ಅವರ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಪುಸ್ತಕಗಳನ್ನು ಶಾಲೆಯ ಕಡ್ಡಾಯ ಓದುವ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ನಡೆದ ಮೌನ ಓದು ಪ್ರತಿಭಟನೆ ವೇಳೆ ಹಲ್ಲೆ ಮಾಡಿರುವ ಘಟನೆ ಅಹ್ಮದಾಬಾದ್ ನಲ್ಲಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಸ್ತ್ರಾಪುರ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ವಸ್ತ್ರಾಪುರದ ಜಿಲ್ಲಾ ಶಿಕ್ಷಣಾಧಿಕಾರಿ (DEO) ಕಚೇರಿ ಸಮೀಪದ ಪುರಸಭೆ ಉದ್ಯಾನದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆದಿತ್ತು. ಸುಮಾರು 20 ಮಂದಿ, ಮಹಿಳೆಯರೂ ಸೇರಿದಂತೆ, ವಿವಿಧ ಪುಸ್ತಕಗಳನ್ನು ಹಿಡಿದು ಸುಮಾರು ಎರಡು ಗಂಟೆಗಳ ಕಾಲ ಮೌನವಾಗಿ ಓದುತ್ತಿದ್ದರು. ಓದುವ ಕಾರ್ಯಕ್ರಮಕ್ಕಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸಿ ಜನರನ್ನು ಒಟ್ಟುಗೂಡಿಸಲಾಗಿತ್ತು.
ಶಿಲಾಜ್ ಶಾಲೆಯು ಪೋಷಕರು ಮತ್ತು ಬಲಪಂಥೀಯ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ‘ಐ ಆ್ಯಮ್ ಮಲಾಲಾ’ ಮತ್ತು ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಪುಸ್ತಕಗಳನ್ನು ತನ್ನ ಓದುವ ಪಟ್ಟಿಯಿಂದ ಕೈಬಿಟ್ಟಿತ್ತು. ಇದನ್ನು ವಿರೋಧಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು.
ಪ್ರತಿಭಟನಾಕಾರರು ಮಲಾಲಾ ಮತ್ತು ಆ್ಯನ್ ಫ್ರಾಂಕ್ ಅವರ ಪುಸ್ತಕಗಳ ಜತೆಗೆ ‘Why I Am An Atheist’, ‘1984’, ‘Bhima Koregaon: Our War Cry’, ‘There Is Gunpowder in the Air’ ಮತ್ತು ‘The Meat of the Matter: How Politics of Food Shapes Our Health’ ಸೇರಿದಂತೆ ಹಲವು ಪುಸ್ತಕಗಳನ್ನು ಓದುತ್ತಿದ್ದರು.
ಪ್ರತಿಭಟನಾಕಾರರು ಸಂಜೆ 6 ಗಂಟೆ ಸುಮಾರಿಗೆ ಹೊರಡಲು ಸಿದ್ಧವಾಗುತ್ತಿದ್ದಾಗ 18ರಿಂದ 20 ಮಂದಿಯ ಗುಂಪು ಉದ್ಯಾನಕ್ಕೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವರು ಕೋಲುಗಳನ್ನು ಹಿಡಿದಿದ್ದರು ಮತ್ತು ಕೇಸರಿ ಸ್ಕಾರ್ಫ್ ಧರಿಸಿದ್ದರು ಎಂದು ದೂರುದಲ್ಲಿ ಆರೋಪಿಸಲಾಗಿದೆ. ಗುಂಪಿನ ಸದಸ್ಯರು ತಾವು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (VHP)ಗೆ ಸೇರಿದವರು ಎಂದು ಹೇಳಿಕೊಂಡಿದ್ದರು ಎಂದು ವಸ್ತ್ರಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಎಂ. ಚೌಧರಿ ತಿಳಿಸಿದ್ದಾರೆ.
ಮಲಾಲಾ ಅವರ ಪುಸ್ತಕವನ್ನು ಏಕೆ ಓದುತ್ತಿದ್ದೀರಿ ಎಂದು ಗುಂಪು ಪ್ರತಿಭಟನಾಕಾರರನ್ನು ಪ್ರಶ್ನಿಸಿದ್ದರಿಂದ ವಾಗ್ವಾದ ನಡೆಯಿತು. ಬಳಿಕ ಕೋಲುಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸರು ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರು 8ರಿಂದ 10 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಬೋಪಾಲ್ನಲ್ಲಿ ಐಟಿ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ ನಡೆಸುತ್ತಿರುವ ಜಯಕುಮಾರ್ ಥಕ್ಕರ್ (30) ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಹಿರೇನ್ ರಬಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಪುಸ್ತಕ ಓದಿದ್ದಕ್ಕಾಗಿ ತಮ್ಮನ್ನು ಪ್ರಶ್ನಿಸಿದರು ಎಂದು ತಿಳಿಸಿದ್ದಾರೆ. ಬಳಿಕ ಥಕ್ಕರ್, ಓದುಗ ಸಮೂಹದ ಸದಸ್ಯರಾದ ಸ್ನೇಹ್ ಭಾವ್ಸರ್, ಸವನ್ ಜಲರಾರಿಯಾ ಮತ್ತು ಶಶಿಕುಮಾರ್ ಅವರನ್ನು ಕೋಲುಗಳಿಂದ ಹೊಡೆಯಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಸಮೂಹದ ಮತ್ತೊಬ್ಬ ಸದಸ್ಯೆ ಸ್ವಾತಿ ಗೋಸ್ವಾಮಿ ಅವರ ಕೂದಲನ್ನು ಎಳೆಯಲಾಯಿತು. ಮೈತ್ರೇಯಿ ಛಾಯಾ ಅವರಿಗೆ ಮೇಲೆ ಹಲ್ಲೆ ನಡೆಸಲಾಗಿದೆ. ಮತ್ತೊಬ್ಬ ಓದುಗ ಆಧ್ಯ ಛತ್ರೋಲಾ ಅವರೊಂದಿಗೂ ಅಡ್ಡಿಪಡಿಸಿದವರು ಮಾತಿನ ಚಕಮಕಿ ನಡೆಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮುಂದೆ ಇಂತಹ ಕೂಟಗಳಲ್ಲಿ ಪುಸ್ತಕ ಓದಬಾರದು ಎಂದು ಗುಂಪು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿ ಬೆದರಿಕೆ ಹಾಕಿತು ಎಂದು ಥಕ್ಕರ್ ಆರೋಪಿಸಿದ್ದಾರೆ. ಬಳಿಕ ಓದುಗ ಸಮೂಹದ ಸದಸ್ಯರೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಥಕ್ಕರ್, ಭಾವ್ಸರ್ ಮತ್ತು ಜಲರಾರಿಯಾ ಅವರು ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ಗಾಯಗಳಿಗೆ ಹೊರರೋಗಿ ಚಿಕಿತ್ಸೆ ಪಡೆದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಥಕ್ಕರ್ ಅವರು ಹಿರೇನ್ ರಬಾರಿ, ಜಿಮಿತ್ ರಬಾರಿ ಸೇರಿದಂತೆ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯಡಿ ಗಲಭೆ, ಕಾನೂನುಬಾಹಿರ ಸಭೆ ಮತ್ತು ದೈಹಿಕ ನೋವು ಉಂಟುಮಾಡಿದ ಆರೋಪಗಳಿಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಚೌಧರಿ ತಿಳಿಸಿದ್ದಾರೆ. ದೂರುದಾರರಿಗೆ ಪರಿಚಿತರಾದ ಇಬ್ಬರು ಆರೋಪಿಗಳಿದ್ದು, ಇನ್ನೂ ಆರು ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ. ಅವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದಾಳಿಕೋರರು ಬಜರಂಗದಳ ಮತ್ತು VHPಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಬಜರಂಗದಳವು ದಾಳಿಯ ಹೊಣೆ ಹೊತ್ತಿದೆ ಎಂಬ ವರದಿಯಿದ್ದರೂ, ಎಫ್ಐಆರ್ನಲ್ಲಿ ಸಂಘಟನೆಯನ್ನು ಆರೋಪಿಯಾಗಿ ಹೆಸರಿಸಲಾಗಿಲ್ಲ.
ಕೆಲವು ವಾರಗಳ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಗುಂಪುಗಳ ಪ್ರತಿಭಟನೆಯ ಬಳಿಕ ಅಹಮದಾಬಾದ್ನ ಖಾಸಗಿ ಶಾಲೆಯೊಂದು ಮಲಾಲಾ ಅವರ ‘ಐ ಆ್ಯಮ್ ಮಲಾಲಾ’ ಮತ್ತು ಆ್ಯನ್ ಫ್ರಾಂಕ್ ಅವರ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಪುಸ್ತಕಗಳನ್ನು ಕಡ್ಡಾಯ ಓದುವ ಪಟ್ಟಿಯಿಂದ ಕೈಬಿಟ್ಟಿತ್ತು. ಆ ನಿರ್ಧಾರದ ವಿರುದ್ಧವೇ ವಸ್ತ್ರಾಪುರದಲ್ಲಿ ಈ ಮೌನ ಓದು ಪ್ರತಿಭಟನೆ ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.






