AI ಶೃಂಗಸಭೆ | ಚೀನಾದಲ್ಲಿ ತಯಾರಾದ ರೋಬೋಡಾಗ್ ತನ್ನದೆಂದು ಪ್ರದರ್ಶಿಸಿದ ವಿವಾದ: ಕ್ಷಮೆಯಾಚಿಸಿದ ಗಾಲ್ಗೋಟಿಯಾಸ್ ವಿವಿ

Screengrab : X
ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯಲ್ಲಿ ಚೀನಾದಲ್ಲಿ ತಯಾರಾದ ರೋಬೋಟಿಕ್ ನಾಯಿಯನ್ನು ತನ್ನದೇ ಸಾಧನೆಯೆಂಬಂತೆ ಪ್ರದರ್ಶಿಸಿದ್ದ ಆರೋಪಕ್ಕೆ ಗುರಿಯಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದಿಂದ ಸ್ಟಾಲ್ ತೆರವುಗೊಳಿಸಿರುವುದಾಗಿ ಸಂಸ್ಥೆಯು ತಿಳಿಸಿದೆ.
ಎರಡು ದಿನಗಳಲ್ಲಿ ಮೂರನೇ ಬಾರಿ ಸ್ಪಷ್ಟೀಕರಣ ನೀಡಿರುವ ವಿಶ್ವವಿದ್ಯಾಲಯ, ಈ ಬಾರಿ ತನ್ನ ಸಂವಹನ ವಿಭಾಗದ ಮುಖ್ಯಸ್ಥೆ ನೇಹಾ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಅವರು ತಿಳಿವಳಿಕೆ ಇಲ್ಲದವರು, ಮಾಧ್ಯಮಗಳೊಂದಿಗೆ ಮಾತನಾಡಲು ಅವರಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಆಮದು ಮಾಡಿಕೊಂಡ ಸಾಧನವನ್ನು ತನ್ನದೇ ಅವಿಷ್ಕಾರ ಎಂದು ತಪ್ಪಾಗಿ ಹೇಳಿಕೊಂಡ ಆರೋಪ ಎದುರಿಸುತ್ತಿರುವ ಸಂಸ್ಥೆ, ನೇಹಾ ಸಿಂಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಉತ್ಸಾಹದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ಚೀನಾದ ಯುನಿಟ್ರೀ ಸಂಸ್ಥೆ ತಯಾರಿಸಿದ AI ಚಾಲಿತ ರೋಬೋಟಿಕ್ ನಾಯಿಯನ್ನು USD 2,800 (ಸುಮಾರು ₹2.3 ಲಕ್ಷ) ಬೆಲೆಗೆ ಮಾರಾಟ ಮಾಡಿದ್ದಾಗಿ ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿವಾದ ಉಂಟಾಯಿತು. ರೋಬೊಡಾಗನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನವೆಂದು ತಪ್ಪಾಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು.
X ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹಿಂದಿನ ಹೇಳಿಕೆಯಲ್ಲಿ, ರೋಬೋಡಾಗ್ ಅನ್ನು ಯುನಿಟ್ರೀಯಿಂದ ಖರೀದಿಸಿ ಕಲಿಕೆಯ ಸಾಧನವಾಗಿ ಬಳಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿತ್ತು. ವಿದ್ಯಾರ್ಥಿಗಳು ಇದರೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ. ನಾವು ಈ ರೋಬೋಡಾಗ್ ನಿರ್ಮಿಸಿಲ್ಲ, ಹಾಗೆ ಎಂದಿಗೂ ಹೇಳಿಕೊಂಡಿಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿತ್ತು.
ವಿವಾದದ ಹಿನ್ನೆಲೆ ವಿಶ್ವವಿದ್ಯಾಲಯವನ್ನು AI ಶೃಂಗಸಭೆಯಿಂದ ತಕ್ಷಣ ಸ್ಟಾಲ್ ಖಾಲಿಮಾಡಿಕೊಂಡು ತೆರಳುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಹೊರಬಂದಿದ್ದರೂ, ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಆಯೋಜಕರ ಭಾವನೆಗೆ ಗೌರವ ಸೂಚಿಸಿ ಆವರಣವನ್ನು ಖಾಲಿ ಮಾಡಿರುವುದಾಗಿ ಅದು ತಿಳಿಸಿದೆ. ವಿವಾದ ಹೆಚ್ಚುತ್ತಿದ್ದಂತೆ, AI ಶೃಂಗಸಭೆಯಲ್ಲಿ ಪ್ರದರ್ಶಕರು ತಮ್ಮದಲ್ಲದ ಉತ್ಪನ್ನಗಳನ್ನು ಪ್ರದರ್ಶಿಸಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.







