ಭೋಪಾಲ್ | ಏಮ್ಸ್ ಆಸ್ಪತ್ರೆಯ ಲಿಫ್ಟ್ನಲ್ಲಿ ಮಹಿಳಾ ಉದ್ಯೋಗಿಯ ಸರ ಕಳ್ಳತನ

Screengrab : X
ಭೋಪಾಲ್: ಏಮ್ಸ್ ಭೋಪಾಲ್ ಆಸ್ಪತ್ರೆಯ ಲಿಫ್ಟ್ನಲ್ಲಿ ಮಹಿಳಾ ಉದ್ಯೋಗಿಯೊಬ್ಬರ ಸರ ಕಳ್ಳತನ ನಡೆದಿರುವ ಘಟನೆ ರವಿವಾರ ನಡೆದಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಲಿಫ್ಟ್ನಲ್ಲಿ ತೆರಳುತ್ತಿರುವ ಆಸ್ಪತ್ರೆಯ ಮಹಿಳಾ ಉದ್ಯೋಗಿಯೊಬ್ಬರು ಓರ್ವ ಪುರುಷನೊಂದಿಗೆ ಮಾತುಕತೆಯಲ್ಲಿ ತೊಡಗಿರುವುದು ಸೆರೆಯಾಗಿದೆ.
ಮಹಿಳಾ ಉದ್ಯೋಗಿಯು ಲಿಫ್ಟ್ನಿಂದ ನಿರ್ಗಮಿಸಲು ಮುಂದಾದಾಗ, ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ನಿಧಾನವಾಗಿ ಆಕೆಯ ಮುಂದೆ ನಡೆದು ಬಂದು, ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತು, ಆಕೆಯನ್ನು ಮತ್ತೆ ಲಿಫ್ಟ್ ಒಳಗೆ ನೂಕಿರುವುದು ಆ ವಿಡಿಯೊದಲ್ಲಿ ದಾಖಲಾಗಿದೆ.
ಆತನನ್ನು ಹಿಂಬಾಲಿಸಲು ಮಹಿಳಾ ಉದ್ಯೋಗಿ ಪ್ರಯತ್ನಿಸಿದರೂ, ಆ ಹೊತ್ತಿಗೆ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಪರಾರಿಯಾಗುವಲ್ಲಿ ಆತ ಯಶಸ್ವಿಯಾಗಿದ್ದಾನೆ.
ಭಾರತದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಯಲ್ಲಿನ ಭದ್ರತಾ ಲೋಪವು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ನೆಲ ಮಹಡಿಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆಯ ಬಗ್ಗೆ ಸಾರ್ವಜನಿಕರು ಆಸ್ಪತ್ರೆಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.





